ಹೊಸದಿಗಂತ ಡಿಜಿಟಲ್ ಡೆಸ್ಕ್:
2022ರಲ್ಲಿ ಪಶ್ಚಿಮ ಬಂಗಾಳದ ಭೂಪತಿನಗರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಮೂವರು ಮೃತಪಟ್ಟಿದ್ದರು.
ಪುರ್ಬಾ ಮೇದಿನಿಪುರ ಜಿಲ್ಲೆಯ ಭೂಪತಿನಗರದ ನಿವಾಸಿ ಪಚಾನನ್ ಘೋರೈ ಅವರನ್ನು ಶುಕ್ರವಾರ ಬಂಧಿಸಲಾಗಿದೆ. ತನಿಖೆಯ ಸಂದರ್ಭ ಆರೋಪಿ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ರಾಜ್ ಕುಮಾರ್ ಮನ್ನಾ ಎಂಬವರ ಮನೆಯಲ್ಲಿ ಸಂಭವಿಸಿದ ಹೆಚ್ಚಿನ ತೀವ್ರತೆಯ ಸ್ಫೋಟದಲ್ಲಿ ಮಾಲೀಕ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಬುದ್ಧದೇಬ್ ಮನ್ನಾ ಅಲಿಯಾಸ್ ಲಾಲು ಮತ್ತು ಬಿಸ್ವಜಿತ್ ಗಯೆನ್ ತದನಂತರ ಸಾವನ್ನಪ್ಪಿದ್ದರು.
ಡಿಸೆಂಬರ್ 20, 2022 ರಂದು ರಾಜ್ಯ ಪೊಲೀಸರಿಂದ ತನಿಖೆಯನ್ನು ವಹಿಸಿಕೊಂಡ NIA, ಈ ಪ್ರದೇಶದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರ ಹೆಚ್ಚಿಸಲು, ಕಚ್ಚಾ ಬಾಂಬ್‌ಗಳನ್ನು ತಯಾರಿಸಲು ಸ್ಫೋಟಕಗಳ ಪೂರೈಕೆಗೆ ಸಂಬಂಧಿಸಿದ ಕ್ರಿಮಿನಲ್ ಪಿತೂರಿಯ ಪರಿಣಾಮವಾಗಿ ಸ್ಫೋಟ ಸಂಭವಿಸಿದೆ ಎಂದು ಹೇಳಿತ್ತು.