ಕಸಾಪ ದಿಂದ 2022ನೇ ಸಾಲಿನ ವಿವಿಧ ‘ದತ್ತಿ ಪ್ರಶಸ್ತಿ’ಗಳಿಗೆ ಪುಸ್ತಕಗಳ ಆಹ್ವಾನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುಸ್ತಕಗಳಿಗೆ ನೀಡಲಾಗುವ ವಿವಿಧ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಿಗಾಗಿ ಪುಸ್ತಕಗಳ ಆಹ್ವಾನ ಮಾಡಲಾಗಿದೆ. 2022 ಜನವರಿ 1 ರಿಂದ ಡಿಸೆಂಬರ್ 31ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು ಅಥವಾ ಪ್ರಕಾಶಕರು ಕಳಿಸಿಕೊಡಬಹುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2022ನೆಯ ಸಾಲಿನಲ್ಲಿ ಪ್ರಕಟಗೊಂಡಿರುವ ಒಟ್ಟು 51 ಪ್ರಕಾರಗಳ ಪುಸ್ತಕಗಳಿಗೆ ವಿವಿಧ ದತ್ತಿ ಪುರಸ್ಕಾರಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನೀಡುತ್ತಿದೆ. ಅದಕ್ಕಾಗಿ ಬೇರೆ ಬೇರೆ ದತ್ತಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಿದ್ದು, ಇದಕ್ಕಾಗಿ 51 ವಿವಿಧ ಪ್ರಕಾರಗಳ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪ್ರತಿ ದತ್ತಿ ಪ್ರಶಸ್ತಿಯ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು, ಯಾವ ದತ್ತಿಗಾಗಿ ಎನ್ನುವುದನ್ನು ಪುಸ್ತಕದ ಮೊದಲ ಪುಟದಲ್ಲಿ ಸ್ಪಷ್ಟವಾಗಿ ಬರೆದು ‘ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು-560 018’ ಅವರಿಗೆ ಕಳುಹಿಸಲು ಪ್ರಕಟಣೆಯಲ್ಲಿ ಕೋರಿದೆ.

ಮಾಹಿತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ ತಾಣ www.kasapa.in ಅಥವಾ ದೂ.ಸಂ. 080-26612991/26623584 ಮೂಲಕ ಮಾಹಿತಿ ಪಡೆಯಬಹುದಾಗಿದೆ.

ಈಗಾಗಲೇ ನಿರ್ದಿಷ್ಟ ದತ್ತಿ ಪ್ರಶಸ್ತಿಯಲ್ಲಿ ಒಂದು ಬಾರಿ ಪ್ರಶಸ್ತಿ ಪುರಸ್ಕೃತರಾಗಿದ್ದರೆ ಅದೇ ವಿಭಾಗಕ್ಕೆ ಮತ್ತೆ ಭಾಗವಹಿಸುವಂತಿಲ್ಲ. ಆದರೆ ಬೇರೆ ದತ್ತಿ ವಿಭಾಗಕ್ಕೆ ಪುಸ್ತಕಗಳನ್ನು ಕಳುಹಿಸಲು ಅವಕಾಶವಿರುತ್ತದೆ. ಒಬ್ಬರು ಎಷ್ಟು ಪ್ರಕಾರದ ದತ್ತಿ ವಿಭಾಗಕ್ಕಾದರೂ ಪುಸ್ತಕಗಳನ್ನು ಕಳುಹಿಸಬಹುದು, ಆದರೆ ಪ್ರತಿ ವಿಭಾಗಕ್ಕೂ ಪ್ರತ್ಯೇಕ ಮೂರು ಪುಸ್ತಗಳನ್ನು ಸಲ್ಲಿಸಬೇಕು. ಪ್ರಶಸ್ತಿಯ ಪರಿಶೀಲನೆಗೆ ಕಳುಹಿಸಿರುವ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ತಡವಾಗಿ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ. ದತ್ತಿ ಪ್ರಶಸ್ತಿಯಲ್ಲಿ ಭಾಗವಹಿಸುವವರು ಪುಸ್ತಕದ ಮೊದಲ ಪುಟದಲ್ಲಿ ದತ್ತಿಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವದ ಸಂಖ್ಯೆಯನ್ನು ಸ್ಪಷ್ಟವಾಗಿ ಸೂಚಿಸಬೇಕು.

ಪುಸ್ತಕ ದತ್ತಿ ಪ್ರಶಸ್ತಿಗೆ ಪುಸ್ತಕಗಳನ್ನು ಕಳುಹಿಸುವವರು ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ʻಕನ್ನಡ ಸಾಹಿತ್ಯ ಪರಿಷತ್ತಿನʼ ಆಜೀವ ಸದಸ್ಯತ್ವವನ್ನು ಕಡ್ಡಾಯವಾಗಿ ಹೊಂದಿರಬೇಕು. ಒಂದು ವೇಳೆ ಇನ್ನೂ ಸದಸ್ಯರಾಗಿರದಿದ್ದರೆ ತಕ್ಷಣದಲ್ಲಿ ಆಜೀವ ಸದಸ್ಯತ್ವವನ್ನು ಪಡೆದು ದತ್ತಿ ಪ್ರಶಸ್ತಿಗಳ ಸ್ಪರ್ಧೆಗೆ ಪ್ರವೇಶ ಪಡೆಯಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ. ಡಾ.ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪುಸ್ತಕಗಳನ್ನು ಕಳುಹಿಸಲು ಜೂನ್ 24 ಕೊನೆಯ ದಿನವಾಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!