Wednesday, July 6, 2022

Latest Posts

2022ರ ಸೆಪ್ಟಂಬರ್ ನೊಳಗೆ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಪೂರ್ಣ: ಚಿತ್ರನಟ ಅನಿರುದ್ಧ್

ಹೊಸ ದಿಗಂತ ವರದಿ, ಮೈಸೂರು:

ಮೈಸೂರು ತಾಲೂಕಿನ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ನಟ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಮುಂದಿನ ಸೆಪ್ಟೆಂಬರ್ ಒಳಗೆ ಪೂರ್ಣಗೊಳ್ಳಲಿದೆ ಎಂದು ವಿಷ್ಣುವರ್ಧನ್‌ರ ಅಳಿಯ ಚಿತ್ರ ನಟ ಅನಿರುದ್ಧ ತಿಳಿಸಿದರು.
ಗುರುವಾರ ಸಾಹಸಸಿಂಹ ವಿಷ್ಣುವರ್ಧನ್ ನಿಧನರಾಗಿ 12 ನೇ ವರ್ಷವಾದ ಹಿನ್ನಲೆಯಲ್ಲಿ ಅವರ ಪುಣ್ಯ ಸ್ಮರಣೆ ಅಂಗವಾಗಿ ಮೈಸೂರು ತಾಲೂಕಿನ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣು ಸ್ಮಾರಕದ ಬಳಿ ವಿಷ್ಣುವರ್ಧನ್ ಪತ್ನಿ ಚಿತ್ರ ನಟಿ ಭಾರತಿ, ಅಳಿಯ ಅನಿರುದ್ಧ ಹಾಗೂ ಅಭಿಮಾನಿಗಳು ಸೇರಿ ಪೂಜೆ ನೇರವೇರಿಸಿದರು.
ಈ ಸಂಧರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಟ ಅನಿರುದ್ಧ , ಡಾ.ವಿಷ್ಣುವರ್ಧನ್ ಅವರ ಸ್ಮಾರಕದ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ. ಸರ್ಕಾರದಿಂದಲೂ ನಮಗೆ ಬೆಂಬಲ ದೊರೆಯುತ್ತಿದೆ. ಹಾಗಾಗಿ 2022ರ ಸೆಪ್ಟೆಂಬರ್ ಒಳಗೆ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು.
ಈ ಸ್ಮಾರಕದಲ್ಲಿ ಡಾ.ವಿಷ್ಣು ಅವರ 700 ಕ್ಕೂ ಅಧಿಕ ಫೋಟೋಗಳನ್ನು ಬಳಸಿ ಫೋಟೋ ಗ್ಯಾಲರಿ ಮಾಡಲಾಗುವುದು. ಜೊತೆಗೆ ರಂಗಭೂಮಿ ಶಿಬಿರಗಳು ಇಲ್ಲಿ ನಡೆಯುತ್ತವೆ. ಹಾಗೆ ಇನ್ನೂ ಅನೇಕ ಆಶ್ಚರ್ಯಕರ ವಿಚಾರಗಳು ಇವೆ. ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಇಲ್ಲಿ ಇಂಡಿಯನ್ ಫಿಲಂ ಟೆಲಿವಿಷನ್ ಇನ್ಸಿ÷್ಟಟ್ಯೂಟ್ ಶಾಖೆಯನ್ನು ಪ್ರಾರಂಭಿಸುವ ಪ್ರಯತ್ನವು ನಡೆಯುತ್ತಿದೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಬಂದ್‌ಗೆ ಪ್ರತಿಕ್ರಿಯಿಸಿ, ಬಂದ್ ಎಲ್ಲದಕ್ಕೂ ಪರಿಹಾರ ಅಲ್ಲ. ಆದರೆ, ನಮ್ಮ ವಿಚಾರ, ಹೋರಾಟದ ವಿಷಯ ಬಂದ್ ನಿಂದ ಎಲ್ಲರಿಗೂ ತಿಳಿಯುತ್ತದೆ. ಆದರೆ, ಇದರಿಂದ ತುಂಬಾ ಜನರಿಗೆ ನಷ್ಟವಾಗುತ್ತದೆ. ಯಾವುದೇ ಹೋರಾಟಕ್ಕೆ ಬಂದ್ ಉತ್ತರವಲ್ಲ ಬೇರೆ ರೀತಿ ಹೋರಾಟ ಮಾಡಬೇಕು ಎಂದು ಹೇಳಿದರು.
ಕನ್ನಡ ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಇದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಹಿರಂಗವಾಗಿ ಎಲ್ಲರೂ ನಿಂತು ಹೋರಾಟ ಮಾಡಲು ಸಾಧ್ಯವಿಲ್ಲ. ಒಂದು ಕಡೆ ಕೋವಿಡ್, ಮತ್ತೊಂದು ಕಡೆ ಕರ್ಫೂ್ಯ ಇದೆ. ಇಂತಹ ಸಂದರ್ಭಗಳಲ್ಲಿ ಒಂದೇ ವೇದಿಕೆಯಲ್ಲಿ ನಿಂತು ಹೋರಾಟದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ.
ಹಾಗಾಗಿ ಸಾಮಾಜಿಕ ಜಾಲತಾಣಗಳ ಮುಖಾಂತರ ನಟರು ತಮ್ಮ ಅನಿಸಿಕೆಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಯಾವಾಗಲೂ ಕರ್ನಾಟಕ ಚಿತ್ರರಂಗ ಒಂದೇ ಅದು ಯಾವಾಗಲೂ ಕನ್ನಡ ಅಭಿಮಾನಿಗಳ ಜೊತೆಯಲ್ಲಿ ಕರ್ನಾಟಕದ ಜೊತೆಯಲ್ಲಿ ಒಂದಾಗಿ ಇರುತ್ತದೆ ಎಂದರು.
ಕನ್ನಡ ಚಿತ್ರರಂಗದ ನಾಯಕರಾಗಿ ಚಿತ್ರ ನಟ ಶಿವಣ್ಣ ಇದ್ದಾರೆ. ಅವರು ಹಿರಿಯ ಕಲಾವಿದರು. ಕಲಾವಿದರ ಸಂಘ, ಮತ್ತು ವಾಣಿಜ್ಯ ಮಂಡಳಿ ಸೇರಿ ಅವರ ಜೊತೆ ಮಾತನಾಡಿ, ಅವರನ್ನು ನಾಯಕರನ್ನಾಗಿ ಮಾಡಿದರೆ ನಮಗೆ ಸಂತೋಷ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss