ಹೊಸದಿಲ್ಲಿ: ಪ್ರಧಾನಿಯವರ ಆಶಯದಂತೆ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಹಾಗೂ ನ್ಯಾನೋ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಕರ್ನಾಟಕದ ರೈತರು ಮತ್ತು ಸಹಕಾರಿಗಳನ್ನು ಉದ್ದೇಶಿಸಿ ವೆಬಿನಾರ್ ನಲ್ಲಿ ಮಾತನಾಡಿದ ಸಚಿವರು, ರೈತರು ಮಣ್ಣಿನ ಆರೋಗ್ಯ ಕಾರ್ಡ್ ಅನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಮಣ್ಣಿನ ಆರೋಗ್ಯ ಕಾರ್ಡ್ ಮೂಲಕ ಯಾವ ಭೂಮಿಗೆ ಯಾವ ಪೋಷಕಾಂಶದ ಆವಶ್ಯಕತೆ ಇದೆ ಎಂಬುದನ್ನು ಪತ್ತೆ ಮಾಡಿ, ರಸ ಗೊಬ್ಬರಗಳನ್ನು ಬಳಕೆ ಮಾಡಬೇಕು. ಇದರಿಂದಾಗಿ ಅನಾವಶ್ಯಕವಾಗಿ ಬಳಸುವ ರಸಗೊಬ್ಬರಗಳನ್ನು ಕಡಿಮೆ ಮಾಡಬಹುದು. ರಸಗೊಬ್ಬರಗಳ ಬಳಕೆಯ ಬದಲು ಸಾವಯವ ಹಾಗೂ ನ್ಯಾನೋ ಗೊಬ್ಬರ ಬಳಸುವುದರಿಂದ ರೈತರಿಗೆ ಖರ್ಚು ಕಡಿಮೆಯಾಗುತ್ತದೆ, ಮಣ್ಣಿನ ಆರೋಗ್ಯ ಹೆಚ್ಚುತ್ತದೆ. ಈ ಗೊಬ್ಬರ ವಿಧಾನಕ್ಕೆ ಹೆಚ್ಚು ಪ್ರೋತ್ಸಾಹ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಸೂಚಿಸಿದ್ದಾರೆ ಎಂದು ಸಚಿವ ಡಿವಿಎಸ್ ಹೇಳಿದರು.
2023ರ ವೇಳೆಗೆ ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಂತೆ ಪ್ರಧಾನಿಯವರು ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ. ಪ್ರಸ್ತುತ ಶೇ. 70ರಷ್ಟು ರಸಗೊಬ್ಬರ ದೇಶೀಯವಾಗಿ ಉತ್ಪಾದನೆಯಾಗುತ್ತಿದ್ದು, ಉಳಿದ ಶೇ. 30ರಷ್ಟು ರಸಗೊಬ್ಬರವೂ ದೇಶೀಯವಾಗಿಯೇ ಉತ್ಪಾದನೆಯಾಗುವತ್ತ ಗಮನ ಕೇಂದ್ರೀಕರಿಸಿದೆ. ಸ್ಥಗಿತಗೊಂಡಿದ್ದ ನಾಲ್ಕು ರಸಗೊಬ್ಬರ ಉತ್ಪಾದನಾ ಘಟಕಗಳನ್ನು 40,000 ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುತ್ತಿದೆ ಎಂದು ಸಚಿವ ಸದಾನಂದ ಗೌಡ ತಿಳಿಸಿದರು.
ಪ್ರಧಾನಿಯವರ ‘ಸ್ಥಳೀಯತೆಗೆ ಆದ್ಯತೆ’ಗೆ ಅನುಗುಣವಾಗಿ ನೈಸರ್ಗಿಕವಾಗಿ ಬೆಳೆಯುವ ಸಮುದ್ರ ಕಳೆಯ ಬೆಳವಣಿಗೆ ಹೆಚ್ಚಿಸುವ ‘ಸಾಗರಿಕಾ’, ಜೈವಿಕ ಗೊಬ್ಬರಗಳು, ನೀಮ್ ಕೇಕ್, ಜೈವಿಕ ಕ್ರಿಮಿನಾಶಕಗಳು ಮತ್ತು ನೈಸರ್ಗಿಕ ಪೊಟಾಷ್ ಬಳಕೆಯಂತಹ ಪರಿಸರ ಸ್ನೇಹಿ ಅಭ್ಯಾಸಗಳನ್ನು ಇಫ್ಕೋ ಪ್ರೋತ್ಸಾಹಿಸುತ್ತಿದೆ. ಇದು ಪ್ರಶಂಸನೀಯವಾದುದು ಎಂದು ಅವರು ತಿಳಿಸಿದರು.
ಇಫ್ಕೋ ಆಯೋಜಿಸಿದ್ದ ವೆಬಿನಾರ್ ನಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಯು ಎಸ್ ಅವಸ್ಥಿ ಉಪಸ್ಥಿತರಿದ್ದರು. ಕರ್ನಾಟಕದ ಎಲ್ಲ ಭಾಗಗಳಿಂದ ಸುಮಾರು 1500 ರೈತರು ವೆಬಿನಾರ್ ನಲ್ಲಿ ಭಾಗವಹಿಸಿದ್ದರು.