ಬೆಂಗಳೂರು: ನಿಜವಾಗಿಯೂ ಮಾನವಾಭಿವೃದ್ಧಿ ಎಂದರೆ ಸಮಾಜವೊಂದು ತನ್ನ ಸತ್ಸಂಕಲ್ಪವನ್ನು ಕೃತಿಗಿಳಿಸುವಲ್ಲಿ ಹೊಂದಿರುವ ಕರ್ತೃತ್ವ ಶಕ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಈಗ ನಮಗೆದುರಾಗಿರರುವ ಕೊರೋನ ಪಿಡಗು ನಮಗೆ ಸವಾಲಾಗಿರುವಂತೆಯೇ ಅವಕಾಶವೂ ಆಗಿದೆ. ಇಪ್ಪತ್ತೊಂದು ದಿನಗಳ ಕಾಲ ಮನೆಯಲ್ಲುಳಿಯುವುದೆಂದರೆ ನಮ್ಮಸಾಮೂಹಿಕ ಅನುಶಾಸನ ಮತ್ತು ಸಂಯಮದ ಪರೀಕ್ಷಾ ಕಾಲವೂ ಆಗಿದೆ ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಸಿ.ಆರ್. ಮುಕುಂದ ಹೇಳಿದರು.
ಯುಗಾದಿ ಉತ್ಸವದ ಅಂಗವಾಗಿ ಕೇಶವಕೃಪಾದಲ್ಲಿ ನಡೆದ ಮಹಾನಗರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊರೋನಾ ವೈರಸ್ ಪಿಡುಗು ನಿಯಂತ್ರಣಕ್ಕಾಗಿ ಹೇರಲಾದ ಲಾಕ್ಡೌನ್ ಹಿನ್ನೆಲೆಯಲ್ಲಿ ಅವರು ಫೇಸ್ಬುಕ್ ಮೂಲಕ ಆನ್ಲೈನ್ ವ್ಯವಸ್ಥೆಯಿಂದ ಕಾರ್ಯಕರ್ತರನ್ನು, ನಾಗರಿಕರನ್ನುದ್ದೇಶಿಸಿ ಮಾತನಾಡಿದರು.
ವ್ಯಕ್ತಿ ನಿರ್ಮಾಣದಿಂದ ಉತ್ತಮ ಸಮಾಜ, ರಾಷ್ಟ್ರ ನಿರ್ಮಾಣ: ಈ ಬಾರಿಯ ಯುಗಾದಿ ವಿಶಿಷ್ಟ ಸನ್ನಿವೇಶವೊಂದರ ಹಿನ್ನೆಲೆಯಲ್ಲಿ ಬಂದಿದೆ. ಯುಗಾದಿಯನ್ನು ವಿವಿಧ ಜನರು ವಿಭಿನ್ನ ರೀತಿಯಲ್ಲಿ ಕಾಣುತ್ತಾರೆ. ಕವಿಗಳು ಚೈತ್ರ ಮಾಸ ವಸಂತ ಋತುವಿನ ಬಗ್ಗೆ ಬಣ್ಣಿಸಿದಷ್ಟು ಇನ್ನಾವುದರ ಬಗೆಗೂ ಬರೆದಿರಲಾರರು. ಇದೇ ವೇಳೆ ಸಂಘ ಸ್ವಯಂಸೇವಕರಿಗೂ ಯುಗಾದಿ ವಿಶೇಷ ಪ್ರೇರಣೆ ನೀಡುವ ಉತ್ಸವ… ‘ವ್ಯಕ್ತಿ ನಿರ್ಮಾಣದಿಂದ ಉತ್ತಮ ಸಮಾಜ, ರಾಷ್ಟ್ರ ನಿರ್ಮಾಣ’ದ ಧ್ಯೇಯವನ್ನು ಬದುಕಿನಲ್ಲಿ ಧಾರಣೆಗೈಯ್ಯಲು ಪ್ರೇರಣೆಯಿತ್ತ ಸಂಘಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೆವಾರ್ ಅವರನ್ನು ನೆನಪಿಸಿಕೊಳ್ಳುವ ದಿನವೂ ಹೌದು. ಸಂಘದ ವ್ಯಕ್ತಿ ನಿರ್ಮಾಣ ಮತ್ತು ವ್ಯವಸ್ಥೆ ನಿರ್ಮಾಣ ಧ್ಯೇಯದ ಸಾಕಾರಕ್ಕಾಗಿ ಇಂದು ಅದೆಷ್ಟೋ ಮಂದಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ವ್ಯವಸ್ಥೆ ಪರಿವರ್ತನೆಯ ದಿಕ್ಕಿನಲ್ಲಿ ನಮ್ಮಕಾರ್ಯಕರ್ತರ ಸಾಧನೆಗಳೂ ನಮ್ಮ ಮುಂದಿದೆ. ಕಾಶ್ಮೀರದ 370ನೇ ವಿಧಿ ರದ್ದು ಮುಂತಾದ ಅಂಶಗಳು ನಮ್ಮ ಮುಂದಿವೆ.ಆದರೆ ಈ ವ್ಯವಸ್ಥೆ ಪರಿವರ್ತನೆ ಉಳಿಸಿಕೊಳ್ಳಬೇಕಾದರೆ ಮತ್ತೆ ವ್ಯಕ್ತಿ ನಿರ್ಮಾಣ ಮುಖ್ಯವಾಗುತ್ತದೆ. ಇದು ದೀರ್ಘ ಮತ್ತು ನಿರಂತರ ಪ್ರಕ್ರಿಯೆ. ಯುಗಾದಿ ನಮಗೆ ಈ ನಿಟ್ಟಿನಲ್ಲಿ ಪ್ರೇರಣೆಯಾಗಬೇಕು ಎಂದು ಅವರು ಒತ್ತಿ ಹೇಳಿದರು.
ಶಾರ್ವರೀ ಸಂವತ್ಸರದ ಯುಗಾದಿ ನಮಗೆ ಪ್ರೇರಣೆಯಾಗಲಿ: ಇಂದು ಎತರಕೆ ಬೆಳೆದವರು ಅನೇಕರಿದ್ದರೆ ಡಾಕ್ಟರ್ ಜೀಯವರು ಲಕ್ಷಾಂತರ ಸ್ವಯಂಸೇವಕರನ್ನು ಹತ್ತಿರಕೆ ಸೆಳೆದು ಎತ್ತರಕ್ಕೆ ಬೆಳೆಸಿದವರು. ಅವರ ಜನುಮದಿನವೂ ಯಗಾದಿಯಂದೇ ಇರುವುದು ವಿಶೇಷ.ಜಗತ್ತಿನ ಸೆಮೆಟಿಕ್ ಚಿಂತನೆಗಳಿಗೆ ವಿರುದ್ಧವಾಗಿ ಬದುಕನ್ನು ಕಂಡ ಸಂಸ್ಕೃತಿ ನಮ್ಮದು.ಸವಾಲುಗಳನ್ನು ಕರ್ಮ ಸಿದ್ಧಾಂತದಡಿ ನೋಡುವುದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಲೀಲೆಯಾಗಿ ಕಂಡವರು ನಾವು. ಇಂತಹ ಚಿಂತನೆಯಡಿ ನಾವು ಸವಾಲನ್ನುವಿಭಿನ್ನವಾಗಿ ಎದುರಿಸುವ ಮಾರ್ಗವನ್ನು ನಮ್ಮ ಸಂಸ್ಕೃತಿ ನಮಗೆ ಹೇಳಿಕೊಟ್ಟಿದೆ. ಕೊರೋನಾ ಸೇರಿದಂತೆ ವಿವಿಧ ಸವಾಲುಗಳನ್ನು ನಾವು ಎದುರಿಸಲು ಶಕ್ತವಾಗೋಣ. ಇದಕ್ಕೆ ಶಾರ್ವರೀ ಸಂವತ್ಸರದ ಯುಗಾದಿ ನಮಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.
ಸಂಯಮದ ಮೂಲಕ ವಿಜಯಿಗಳಾಗೋಣ: 21 ದಿನಗಳ ಕಾಲ ಮನೆಯಲ್ಲುಳಿದು ಧ್ಯಾನಸ್ಥರಾಗೋಣ. ಸಾಮೂಹಿಕ ಅನುಶಾಸನದ ಮೂಲಕ ಸಂಯಮದ ಮೂಲಕ ವಿಜಯಿಗಳಾಗೋಣ ಎಂದು ಕರೆಯಿತ್ತರು.