ಹೊಸ ದಿಗಂತ ಆನ್ ಲೈನ್ ಡೆಸ್ಕ್:
ನಿವಾರ್ ಚಂಡಮಾರುತದಿಂದ ತತ್ತರಿಸಿದ ತಮಿಳುನಾಡಿಗೆ ಮತ್ತೊಂದು ಹೊಡೆತ ಬೀಳುವ ಸಾಧ್ಯತೆ ಇದೆ. ಇದೀಗ ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಮತ್ತೆ ಚಂಡಮಾರುತ ಸಂಭವಿಸುವ ಸಾಧ್ಯತೆಯಿದೆ ಎಂದು ತಮಿಳುನಾಡಿನ ಪ್ರಾದೇಶಿಕ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ. ಚಂಡಮಾರುತಗಳ ಪ್ರಭಾವದಿಂದ ಮುಂದಿನ 36 ಗಂಟೆಗಳಲ್ಲಿ ಕರ್ನಾಟಕದ ವಿವಿಧೆಡೆಯೂ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನವೆಂಬರ್ 30ರಿಂದ ಡಿಸೆಂಬರ್ 1ರವರೆಗೆ ಬಂಗಾಳ ಕೊಲ್ಲಿಯ ಆಗ್ನೇಯ ಭಾಗಕ್ಕೆ, ಡಿ. 1ರಿಂದ 3ರವರೆಗೆ ನೈರುತ್ಯ ಭಾಗ ಮತ್ತು ಶ್ರೀಲಂಕಾದ ಪೂರ್ವ ಭಾಗದ ಕರಾವಳಿ ಹಾಗೂ ಡಿ. 2ರಿಂದ 4ರವರೆಗೆ ದಕ್ಷಿಣ ತಮಿಳುನಾಡು-ಕೇರಳ ಕರಾವಳಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ತಮಿಳುನಾಡಿನ ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹೆಚ್ಚಿದ್ದು, ಇದರಿಂದ ಪುದುಚೇರಿ, ಕಾರೈಕಲ್, ಕೇರಳ, ಆಂಧ್ರ ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿಯೂ ಭಾರಿ ಮಳೆಯಾಗುವ ನಿರೀಕ್ಷೆಯಿದೆ.