ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………….
ಹೊಸದಿಗಂತ ಆನ್ ಲೈನ್ ಡೆಸ್ಕ್:
ಚಾಮರಾಜನಗರದಲ್ಲಿ ಉಂಟಾದ ದುರಂತಕ್ಕೆ ಸಂಬಂಧಿಸಿ ಆರೋಗ್ಯ ಸಚಿವ ಸುಧಾಕರ್ ಸುಳ್ಳು ಮಾಹಿತಿ ಕೊಟ್ಟಿದ್ದು, ಆಮ್ಲಜನಕ ಕೊರತೆಯಿಂದಲೇ 24 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಮಾತನಾಡಿ, ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಬಳಿಕ ಡಿಸಿ, ಜಿಲ್ಲಾ ಸರ್ಜನ್ ಹಾಗೂ ಡೀನ್ ಒಪ್ಪಿಕೊಂಡಿದ್ದು, ಆಮ್ಲಜನಕ ಕೊರತೆಯಿಂದಲೇ 24 ಮಂದಿ ಮೃತಪಟ್ಟಿದ್ದಾರೆ. ಜೊತೆಗೆ, ಎಲ್ಲರೂ ರಾತ್ರಿ ಹೊತ್ತಿನಲ್ಲೇ ಮೃತಪಟ್ಟಿದ್ದಾರೆ ಎಂದರು.
ಮೃತರ ಸಂಖ್ಯೆಯಲ್ಲಿ ಮತ್ತು ಆಮ್ಲಜನಕದ ಪೂರೈಕೆಯಲ್ಲಿ ಸಚಿವ ಸಂಪೂರ್ಣ ಸುಳ್ಳು ಮಾಹಿತಿಯನ್ನು ನೀಡಿದ್ದು ಆಮ್ಲಜನಕ ಕೊರತೆಯಿಂದಲೇ ಅಮಾಯಕ ಜೀವಗಳು ಅಸುನೀಗಿವೆ. ಇದರ ಸಂಪೂರ್ಣ ಹೊಣೆಯನ್ನು ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹೊರಬೇಕು ಎಂದು ಕಿಡಿಕಾರಿದರು.
ಸ್ವತಂತ್ರ ಸಂಸ್ಥೆಯೊಂದು ಈ ದುರಂತದ ತನಿಖೆ ನಡೆಸಬೇಕು. ಅಧಿಕಾರಿಯಿಂದ ತನಿಖೆ ಮಾಡಿಸುವುದಲ್ಲ, ಆದ್ದರಿಂದ ಈ ನ್ಯಾಯಾಂಗ ತನಿಖೆಗೆ ಈ ಕ್ಷಣವೇ ಸಿಎಂ ಆದೇಶಿಸಬೇಕು, ತಡವಾದರೇ ಪ್ರಕರಣವೇ ಮುಚ್ಚಿಹೋಗಲಿದೆ, ಮೃತ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.