ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಬಳ್ಳಾರಿ:
ಇಡೀ ದೇಶದಲ್ಲಿಯೆ ಮೊದಲ ಬಾರಿಗೆ ಇಲಾಖೆಯಲ್ಲಿ ಆರಂಭಿಸಲಾಗಿರುವ 24×7 ಪ್ರಾಣಿ ಕಲ್ಯಾಣ ಸಹಾಯವಾಣಿ(ವಾರ್ ರೂಂ)ಗೆ ಕಳೆದ ಒಂದೇ ತಿಂಗಳಲ್ಲಿ 10 ಸಾವಿರ ಕರೆಗಳು ರೈತರಿಂದ ಬಂದಿದ್ದು, ಅವುಗಳಲ್ಲಿ ಶೇ.85ರಷ್ಟು ಇತ್ಯರ್ಥಪಡಿಸಲಾಗಿದೆ ಎಂದು ಸಚಿವ ಚವ್ಹಾಣ ಅವರು ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆ, ಚಿಕಿತ್ಸೆ, ತರಬೇತಿ, ಪಶುಸಂಗೋಪನಾ ಇಲಾಖೆಯ ವಿವಿಧ ಸೇವೆಗಳ ಕುರಿತು ರೈತರಿಂದ ಕರೆಗಳು ಬಂದಿದ್ದು, ಅವುಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಇಲಾಖೆಯಿಂದ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಇಲಾಖೆಯ ಅಧಿಕಾರಿಗಳು ಮತ್ತು ವೈದ್ಯರು ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು ಮತ್ತು ಯಾವುದೇ ರೀತಿಯ ದೂರುಗಳಿಗೆ ಅಸ್ಪದ ನೀಡಬೇಡಿ ಎಂದು ಸೂಚಿಸಿರುವೆ ಎಂದು ತಿಳಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರುವ ಹಿನ್ನೆಲೆ ಗೋವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರತಿ ಜಿಲ್ಲೆಗೊಂದು ಗೋಶಾಲೆ ಸ್ಥಾಪಿಸಲು ನಿರ್ಧರಿಸಿದ್ದು, ಅದರಂತೆ ಎಲ್ಲ ಜಿಲ್ಲೆಗಳಲ್ಲಿ ಕೆಲಸ ಶುರುವಾಗಿದೆ ಎಂದರು. ಈ ಸಂದರ್ಭ ಜಿಲ್ಲಾಧಿಕಾರಿ ಪವನ ಕುಮಾರ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್, ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ಉಪನಿರ್ದೇಶಕ ಪರಮೇಶ್ವರ ನಾಯಕ್ ಸೇರಿದಂತೆ ಇಲಾಖೆಯ ಸಹಾಯಕ ನಿರ್ದೇಶಕರುಗಳು ಮತ್ತು ಪಶುವೈದ್ಯರು ಇತರರಿದ್ದರು.