2025ರೊಳಗೆ ನಗರಗಳಿಗೆ ನಿರಂತರ ನೀರು: ಸಚಿವ ಬೈರತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರು: ರಾಜ್ಯದ ಹಲವಾರು ನಗರಗಳಲ್ಲಿ ನೀರಿನ ಬೇಡಿಕೆ ಆಧರಿಸಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯನ್ನು 2025 ರೊಳಗೆ ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದ್ದಾರೆ.

ಅವರು ಬುಧವಾರ ನಗರದಲ್ಲಿ ನಗರ ನೀರು ಸರಬರಾಜು ಸುಧಾರಣೆಗಳ ಅನುಭವ ಹಾಗೂ ಕರ್ನಾಟಕದಲ್ಲಿ ಇವುಗಳ ಅನುಷ್ಠಾನ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ, ಯೋಜನಾ ಕಾಮಗಾರಿಗಳಾದ ನೀರು ಶುದ್ಧೀಕರಣ ಘಟಕ, ಜಲ ಸಂಗ್ರಹಾಗಾರ ಹಾಗೂ ಪೈಪ್ ಲೈನ್ ಅಳವಡಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸುಜಲ, ಜಲಜೀವನ್ ಯೋಜನೆಗಳನ್ನು ರೂಪಿಸಿದಂತೆ ನಗರ ಪ್ರದೇಶಗಳಲ್ಲಿ ಕರ್ನಾಟಕ ನಗರ ನೀರು ಸರಬರಾಜು ಸುಧಾರಣೆ ಯೋಜನೆಯನ್ನು 2008 ರಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಈಗಲೂ ಬೆಳಗಾವಿ, ಕಲಬುರಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳ ಆಯ್ದ 20 ವಾರ್ಡ್‌ಗಳಲ್ಲಿ ನಿರಂತರ ನೀರು ಸರಬರಾಜು ಯೋಜನೆ ಯಶಸ್ವಿಯಾಗಿ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿದೆ. ವಿಶ್ವಬ್ಯಾಂಕ್ ನೆರವಿನೊಂದಿಗೆ ಈ ಯೋಜನೆಯನ್ನು ಡಿ.ಬಿ.ಒ.ಟಿ. ಮಾದರಿಯಲ್ಲಿ ಅನುಷ್ಠಾನಗೊಳಿಸಲು 2013 ರಲ್ಲಿ ಸರ್ಕಾರ ಅನುಮೋದಿಸಿದೆ ಎಂದರು.

ನಗರ ಪ್ರದೇಶಗಳು ಬೆಳೆಯುತ್ತಿವೆ. ಬಡಾವಣೆಗಳೂ ಹೆಚ್ಚಾಗಿವೆ. ಎಲ್ಲಡೆ ನೀರು ಪೂರೈಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ನದಿ ಮೂಲಗಳಿಂದ ನೀರನ್ನು ತಂದು ನಗರ ಪ್ರದೇಶಗಳಿಗೆ ಪೂರೈಸಲಾಗುತ್ತಿದೆ. ಲೀಟರ್ ಬಾಟಲಿ ನೀರಿಗೆ 20 ರೂ. ಕೊಟ್ಟು ಕುಡಿಯುವ ನಾವು, ಮನೆ ತಾರಸಿ ಮೇಲೆ ಬೀಳುವ ಪರಿಶುದ್ಧ ಮಳೆ ನೀರನ್ನು ಸಂಗ್ರಹಿಸಿ ಬಳಕೆ ಮಾಡಲು ಹಿಂದೆ ಬಿದ್ದಿದ್ದೇವೆ. ಸರಕಾರ ಮಳೆ ನೀರು ಕೋಯ್ಲು ಅಳವಡಿಸಲು ಆದೇಶಿಸಿದ್ದರೂ ಅದನ್ನು ಬಹುತೇಕರು ಪಾಲಿಸುತ್ತಿಲ್ಲ. ನೀರು ಅತ್ಯಮೂಲ್ಯ ಎನ್ನುವ ಜಲಜ್ಞಾನ ಇಲ್ಲದಿರುವುದರಿಂದ ನೀರಿನ ಸದ್ಭಳಕೆ, ಸಂಗ್ರಹಣೆ ಮತ್ತು ಮರುಬಳಕೆಗೆ ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.

ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಎಂ.ಟಿ.ರೇಜು, ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಂ.ದೀಪಾ, ವಿಶ್ವಬ್ಯಾಂಕ್‌ನ ನೀರು ನಿರ್ವಹಣೆ ವ್ಯವಸ್ಥಾಪಕರಾದ ಸುಮಿಲ ಗುಲ್ಯಾನಿ, ಗುಸ್ಟೂವ ಸಾಲ್ಟೈಲ್, ಒಡಿಶಾ ರಾಜ್ಯದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತಿವಣ್ಣನ್ ಸೇರಿದಂತೆ ಅನೇಕ ಜಲ ಸುಧಾರಣೆ ತಜ್ಞರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!