Tuesday, August 16, 2022

Latest Posts

25ಕ್ಕೂ ಹೆಚ್ಚು ಜಾನುವಾರುಗಳು ನಿಗೂಢವಾಗಿ ಸಾವನ್ನಪ್ಪಿದ ಮನೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಮಂಡ್ಯ: ಎತ್ತು, ದನ, ಮೇಕೆ, ಕುರಿ ಸೇರಿದಂತೆ 25ಕ್ಕೂ ಹೆಚ್ಚು ಪ್ರಾಣಿಗಳು ನಿಗೂಢವಾಗಿ ಸಾವನ್ನಪ್ಪಿದ ತಾಲೂಕಿನ ಕೀಲಾರ ಗ್ರಾಮದ ರೈತ ಶಂಕರೇಗೌಡ ಅವರ ಮನೆಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದರು.
ನಂತರ ಮಾತನಾಡಿದ ಅವರು ಕಳೆದ ಸೆ. 22ರಂದು ಶಂಕರೇಗೌಡ ಅವರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಸುಮಾರು 25ಕ್ಕೂ ಹೆಚ್ಚು ಪ್ರಾಣಿಗಳು ನಿಗೂಢವಾಗಿ ಸಾವನ್ನಪ್ಪಿದ್ದು, ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ದೊರಕಿಸುವುದರ ಜೊತೆಗೆ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಸೂಕ್ತ ವರದಿ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಸ್ಥಳದಲ್ಲೇ ಡಿವೈಎಸ್ಪಿ ನವೀನ್‍ಕುಮಾರ್ ಅವರನ್ನು ದೂರವಾಣಿ ಮೂಲಕ ಸಂರ್ಪಕಿಸಿದ ಜಿಲ್ಲಾಧಿಕಾರಿಗಳು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಎಫ್‍ಐಆರ್ ದಾಖಲಿಸುವಂತೆ ಸೂಚಿಸಿದರು.
ಘಟನೆಗೆ ಕಾರಣವೇನು, ಕಿಡಿಗೇಡಿಗಳು ಪ್ರಾಣಿಗಳಿಗೆ ವಿಷ ಹಾಕಿದ್ದರೇ ಎಂಬಿತ್ಯಾದಿ ಬೇರೆ ಬೇರೆ ಮೂಲಗಳಿಂದ ತನಿಖೆ ನಡೆಸಿ ಶೀಘ್ರ ವರದಿ ಸಲ್ಲಿಸುವಂತೆ ಡಿವೈಎಸ್ಪಿಗೆ ಸೂಚಿಸಿದರು.
ನಂತರ ಕೀಲಾರ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಕರೋನ ಲ್ಯಾಪ್ ಟೆಸ್ಟಿಂಗ್ ಕೊಠಡಿಗೆ ತೆರಳಿ ಪಾಸಿಟಿವ್ ಬಂದ ವ್ಯಕ್ತಿಗಳಿಗೆ ತಕ್ಷಣವೇ ಯಾವರೀತಿ ಮುಂಜಾಗೃತಾ ಕ್ರಮಗಳನ್ನು ವಹಿಸಿ ಚಿಕಿತ್ಸೆ ನೀಡಿ ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಬೇಕು ಇತ್ಯಾದಿಗಳ ಬಗ್ಗೆ ಲ್ಯಾಬ್ ಟೆಕ್ನಿಷಿಯನ್ ಅವರಿಗೆ ಮಾರ್ಗದರ್ಶನ ನೀಡಲಾಯಿತು.
ಆಸ್ಪತ್ರೆ ಆರೋಗ್ಯ ಅಧಿಕಾರಿಗಳೊಂದಿಗೆ ಸ್ವಚ್ಛತೆ ,ಆಸ್ಪತ್ರೆ ಮುಂಭಾಗದಲ್ಲಿ ಸ್ಯಾನಿಟೈಸರ್ ಅನ್ನು ಕಡ್ಡಾಯವಾಗಿ ಇರಿಸಲು ಮತ್ತು ಹೊರ ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಚಿಕಿತ್ಸೆ ನೀಡಬೇಕೆಂದು ಸೂಚಿಸಿದರು.
ಕರೋನ ಲ್ಯಾಬ್ ಟೆಸ್ಟಿಂಗ್ ಮಾಡುವ ಎಲ್ಲಾ ಸಿಬ್ಬಂದಿಗಳಿಗೆ ಉಚಿತ ಫುಡ್ ಕಿಟ್‍ಳನ್ನು ನೀಡುವಂತೆ ಮಂಡ್ಯ ತಹಸೀಲ್ದಾರ್ ಚಂದ್ರಶೇಖರ್ ಸಂಗಾಳಿ ಅವರಿಗೆ ಸೂಚನೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss