ಕರ್ನಾಟಕ ಸಹಿತ ದೇಶದ 11 ರಾಜ್ಯಗಳಲ್ಲಿ 25 ಶಂಕಿತ ಐಎಸ್ ಉಗ್ರರ ಬೇಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರ್ನಾಟಕ, ತಮಿಳುನಾಡಿನಲ್ಲಿ ಇಸ್ಲಾಮಿಕ್ ಸ್ಟೇಟ್ಸ್ ಮತ್ತು ಅಲ್ ಖೈದಾ ನಂಟಿನ ಇಸ್ಲಾಮಿಕ್ ತೀವ್ರವಾದಿಗಳನ್ನು ಬಂಧಿಸಿದ ಬೆನ್ನಿಗೇ, 11 ರಾಜ್ಯಗಳಲ್ಲಿ ನಡೆದ ದಾಳಿಗಳಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಬೆಂಬಲಿಗರಾದ 25 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರ ವಿಚಾರಣೆ ವೇಳೆ ದೇಶದಲ್ಲಿ ಹಿಂಸಾತ್ಮಕ ದಾಳಿಗಳಿಗೆ ಸಿದ್ಧತೆ ನಡೆದಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ ಎಂದು ಮೂಲಗಳು ಹೇಳಿವೆ.

ಎಲ್ಲೆಲ್ಲಿ ದಾಳಿ?

ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ತೆಲಂಗಾಣ, ಜಾರ್ಖಂಡ್, ತಮಿಳುನಾಡು, ಕೇರಳ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ತಾನಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ. ಬಂಧಿತರ ಮೇಲೆ ಕಳೆದ ಕೆಲವು ಸಮಯದಿಂದ ಗುಪ್ತಚರ ಸಂಸ್ಥೆಗಳು ನಿಗಾ ಇಟ್ಟಿದ್ದವು. ಐಎಸ್ ವಿಚಾರಗಳಿಂದ ಪ್ರಚೋದಿತರಾಗಿ ಹಿಂಸಾಕೃತ್ಯಗಳಿಗೆ ಮುಂದಾಗಿರುವ ಬಗ್ಗೆ ಸುಳಿವು ಲಭಿಸಿದ ಬೆನ್ನಿಗೇ ಕಾರ್ಯಾಚರಣೆ ಆರಂಭಿಸಲಾಗಿತ್ತು.

ತಮಿಳುನಾಡು ಪೊಲೀಸರು ಇಸ್ಲಾಮಿಕ್ ಸ್ಟೇಟ್ಸ್‌ನ (ಐಎಸ್) ಬೆಂಬಲಿಗರಾದ ಈರೋಡ್ ಮೂಲದ ಆಸೀಫ್ ಮುಸ್ತೀನ್ ಮತ್ತು ಈತನ ಸಹಚರ ಯಾಸಿರ್ ನವಾಬ್ ಜಾನ್‌ನನ್ನು ಬಂಧಿಸಿ ಅವರಿಂದ ಹಲವು ವಸ್ತು ಮತ್ತು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು.
ಪೊಲೀಸ್ ಮೂಲಗಳ ಪ್ರಕಾರ ಚೂರಿ, ಕಪ್ಪು ಐಎಸ್ ಧ್ವಜ, ಪ್ರಚೋದನಾಕಾರಿ ದಾಖಲೆಗಳು, ಡಿಜಿಟಲ್ ಮೀಡಿಯಾ ಸಾಧನಗಳನ್ನು ವಶಪಡಿಸಿಕೊಂಡ ಬೆನ್ನಿಗೇ, ದೇಶದ ಹಲವು ರಾಜ್ಯಗಳಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ತನಿಖೆಯ ವೇಳೆ ದೇಶದಲ್ಲಿ ಭಯೋತ್ಪಾದಕ ಐಎಸ್‌ನ ಮ್ಯಾಗಜೀನ್ ‘ವಾಯ್ಸ್ ಆಫ್ ಹಿಂದ್’ನ ಪ್ರಚಾರಕ್ಕೂ ವ್ಯವಸ್ಥಿತ ಕಾರಸ್ಥಾನ ರೂಪಿಸಲಾಗಿದ್ದು, ಇದರಲ್ಲಿ ಶಾಮೀಲಾಗಿರುವ ಶಕ್ತಿಗಳನ್ನು ಈಗ ಗುರುತಿಸಲಾಗಿದ್ದು, ಈಗ ಐಎಸ್‌ನ ‘ಡಿಜಿಟಲ್ ವಾರಿಯರ್’ಗಳಿಗಾಗಿಯೂ ಶೋಧ ಕಾರ್ಯಾಚರಣೆ ನಡೆದಿದೆ. ವಿವಿಧ ಚಾನೆಲ್‌ಗಳು ಮತ್ತು ವೆಬ್ ಜಾಲಗಳನ್ನು ಹಿಂದು -ಭಾರತ ವಿರೋಧಿ ಪ್ರಚಾರ, ಭಯೋತ್ಪಾದನೆ ಪರವಾಗಿ ಜಿಹಾದಿ ಶಕ್ತಿಗಳು ಬಳಸಿಕೊಳ್ಳುತ್ತಿರುವ ಆಘಾತಕಾರಿ ಮಾಹಿತಿಗಳೂ ವ್ಯಕ್ತವಾಗಿದೆ.
ಕೇಂದ್ರ ಗುಪ್ತಚರ ಸಂಸ್ಥೆಗಳು ಒದಗಿಸಿದ ಮಾಹಿತಿಗಳ ಆಧಾರದಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!