25 ವರ್ಷಗಳ ಬಳಿಕ ಬರುತ್ತಿದೆ ‘ಮತ್ತೆ ಮಾಯಾಮೃಗ’ ಧಾರಾವಾಹಿ…

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾಗಳ ಸೀಕ್ವೆಲ್ ಬರುವುದು ಸಾಮಾನ್ಯ. ಕಿರುತೆರೆಯಲ್ಲಿ ಸೀಕ್ವೆಲ್ ತರುವುದು ಸುಲಭವಲ್ಲ. ಆದರೆ ಈ ಪ್ರಯತ್ನಕ್ಕೆ ನಿರ್ದೇಶಕ ಸೀತಾರಾಮ್ ಅವರು ಮುಂದಾಗಿದ್ದಾರೆ. ಬರೋಬ್ಬರಿ 25 ವರ್ಷಗಳ ಬಳಿಕ ಮಾಯಾಮೃಗ ಧಾರಾವಾಹಿಯ ಸೀಕ್ವೆಲ್ ಬರುತ್ತಿದೆ. ಮತ್ತೆ ಮಾಯಾಮೃಗ ಧಾರಾವಾಹಿಯ ಚಿತ್ರೀಕರಣ ಆರಂಭವಾಗಿದೆ. ‘ಸಿರಿ ಕನ್ನಡ’ ವಾಹಿನಿಯಲ್ಲಿ ಅಕ್ಟೋಬರ್ ಮೂರನೇ ವಾರದಿಂದ ಧಾರಾವಾಹಿ ಪ್ರಸಾರವಾಗಲಿದೆ.

25 ವರ್ಷಗಳ ಬಳಿಕ ಧಾರಾವಾಹಿಯ ಮುಂದುವರೆದ ಭಾಗ ತರುವುದು ಅಷ್ಟು ಸುಲಭವಲ್ಲ. ಸಾಕಷ್ಟು ಚಾಲೆಂಜ್​ಗಳು ಇರುತ್ತದೆ ಎಂಬುದು ಸೀತಾರಾಮ್ ಅವರ ಅಭಿಪ್ರಾಯ. ಈ ಕುರಿತು ಧಾರಾವಾಹಿ ತಂಡ ಕೆಲವು ವಿಷಯಗಳನ್ನು ಹಂಚಿಕೊಂಡಿದೆ.’ಮತ್ತೆ ಮಾಯಾಮೃಗ’ ಧಾರಾವಾಹಿ ತಂಡಧಾರಾವಾಹಿ ನೋಡುವವರ ಮನಸ್ಥಿತಿ ಬದಲಾಗಿದೆ. ಸಿರಿಕನ್ನಡದ ಸಂಜಯ್ ಶಿಂಧೆ ಅವರು ಈ ಪ್ರಪೋಸಲ್​ ತಂದಾಗ ನನಗೆ ಭಯ ಆಯ್ತು. ಮಾಯಾಮೃಗಕ್ಕೆ ಸೀಕ್ವೆಲ್ ಹೇಗೆ ಎಂಬ ಚಿಂತೆ ಕಾಡಿತು. ನಮ್ಮ ಧಾರಾವಾಹಿಯಲ್ಲಿ ನಟಿಸಿದ್ದ ಅನೇಕರು ಈಗ ಬೇರೆ ಬೇರೆ ಕಡೆ ಇದ್ದಾರೆ. ಕೆಲವರು ಈ ಜಗತ್ತಿನಲ್ಲೇ ಇಲ್ಲ ಎಂದು ಮಾಯಮೃಗದ ಸೀಕ್ವೆಲ್​ಗೆ ಇರುವ ಚಾಲೆಂಜ್​ಗಳ ಬಗ್ಗೆ ಸೀತಾರಾಮ್ ವಿವರಿಸಿದರು.

ಶಾಸ್ತ್ರಿಗಳು ಇಂದಿನ ವೇಗದ ಜಗತ್ತಿಗೆ ಹೇಗೆ ಹೊಂದಿಕೊಂಡಿದ್ದಾರೆ, ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ಕಥೆ ಸಾಗಲಿದೆ. ಮಾಯಾಮೃಗ ಧಾರಾವಾಹಿಯಲ್ಲಿ ಅವಿನಾಶ್, ಮಾಳವಿಕ, ರಾಜೇಶ್ ನಟರಂಗ, ವೀಣಾ ಸುಂದರ್ ಮೊದಲಾದವರು ನಟಿಸಿದ್ದರು. ಅವರು ಈ ಧಾರಾವಾಹಿಯಲ್ಲೂ ಅಭಿನಯಿಸಲಿದ್ದಾರೆ. ಇದರ ಜೊತೆಗೆ ಯುವಪೀಳಿಗೆ ಕಥೆ ಹೇಳಲು ಸಾಕಷ್ಟು ಹೊಸ ಪಾತ್ರಗಳು ಸೇರ್ಪಡೆ ಆಗಿದೆ ಎಂದರು ಟಿ.ಎನ್. ಸೀತಾರಾಮ್.

ಮೊದಲು ಮನೆಗೆ ಒಂದು ಟಿವಿ ಇರುತ್ತಿತ್ತು. ಈಗ ರೂಮಿಗೊಂದು ಟಿವಿ ಇರುತ್ತದೆ. ಅಜ್ಜ-ಅಜ್ಜಿ, ಅಪ್ಪ-ಅಮ್ಮ ಹಾಗೂ ಮಕ್ಕಳು ಬೇರೆ-ಬೇರೆ ಕಾರ್ಯಕ್ರಮ ನೋಡುತ್ತಿರುತ್ತಾರೆ. ಅವರನ್ನೆಲ್ಲಾ ನಮ್ಮ ಧಾರಾವಾಹಿ ನೋಡುವ ಹಾಗೆ ಮಾಡುವ ಸವಾಲು ನಮಗಿದೆ ಎಂದರು ನಿರ್ದೇಶಕ ಪಿ.ಶೇಷಾದ್ರಿ.
ಧಾರಾವಾಹಿಯಲ್ಲಿ ನಟಿಸುತ್ತಿರುವ ಲಕ್ಷ್ಮೀ ಚಂದ್ರಶೇಖರ್, ಶಶಿಕುಮಾರ್, ವಿಕ್ರಮ್ ಸೂರಿ, ಸಿರಿ ಕನ್ನಡ ವಾಹಿನಿಯ ಮುಖ್ಯಸ್ಥ ರಾಜೇಶ್ ರಾಜಘಟ್ಟ ಹಾಗೂ ಮತ್ತೆ ಮಾಯಾಮೃಗದಲ್ಲಿ ಅಭಿನಯಿಸುತ್ತಿರುವ ಯುವ ಕಲಾವಿದರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!