ಹೊಸ ದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ಫೋನ್ ಲಭ್ಯವಾಗುವಂತೆ ಮಾಡಿದ್ದ , ಕೇವಲ 251 ರೂಪಾಯಿಗೆ ಸ್ಮಾರ್ಟ್ ಫೋನ್ಗಳನ್ನ ಘೋಷಿಸಿ 2017ರಲ್ಲಿ ಭಾರೀ ಸುದ್ದಿ ಮಾಡಿದ್ದ ನೋಯ್ಡಾ ಮೂಲದ ಉದ್ಯಮಿ ಮೋಹಿತ್ ಗೋಯಲ್ ಅವರನ್ನು ಬಂಧಿಸಲಾಗಿದೆ.
ಡ್ರೈಫ್ರೂಟ್ಸ್ ವ್ಯವಹಾರದ ಹೆಸರಿನಲ್ಲಿ ನೂರಾರು ವ್ಯಾಪಾರಿಗಳಿಗೆ 200 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇರೆಗೆ ಬಂಧಿಸಲಾಗಿದ್ದು, ಗ್ರಾಹಕ ಸರಕು ಆಮದು – ರಫ್ತು ಕಂಪನಿಯ ಇಬ್ಬರು ಅಧಿಕಾರಿಗಳನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.
ತಮ್ಮ ಈ ಡ್ರೈಫ್ರೂಟ್ಸ್ ಸಂಸ್ಥೆಯ ಮೂಲಕ ವಿವಿಧ ರಾಜ್ಯಗಳ ಡ್ರೈಫ್ರೂಟ್ಸ್ ವ್ಯವಹಾರಸ್ಥರ ಬಳಿ ಡ್ರೈಫ್ರೂಟ್ಸ್ ಖರೀದಿಸಲಾಗುತ್ತಿತ್ತು. ಆರಂಭದಲ್ಲಿ ಮಾರುಕಟ್ಟೆಗೆ ಬೆಲೆಗಿಂತ ಹೆಚ್ಚಿನ ಹಣವನ್ನು ಕೊಟ್ಟೇ ಖರೀದಿ ಮಾಡಲಾಗಿದೆ. ಈ ರೀತಿ ನಂಬಿಕೆ ಬೆಳೆಸಿಕೊಂಡ ನಂತರ ಹೆಚ್ಚಿನ ಮೊತ್ತದ ಡ್ರೈಫ್ರೂಟ್ಸ್ಗೆ ಆರ್ಡರ್ ನೀಡಲಾಗಿದೆ. ಅದಕ್ಕೆ ಶೇ. 40 ಹಣವನ್ನು ಮುಂಗಡವಾಗಿ ಪಾವತಿ ಮಾಡಲಾಗಿದೆ. ಉಳಿದ ಹಣವನ್ನು ಚೆಕ್ನಲ್ಲಿ ಬರೆದುಕೊಡಲಾಗಿದೆ. ಆದರೆ ಆ ಚೆಕ್ ಬೌನ್ಸ್ ಆಗಿದೆ. ಈ ರೀತಿ ಒಂದಲ್ಲ ಎರಡಲ್ಲ ಬರೋಬ್ಬರಿ 40ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಮೋಸ ಮಾಡಲಾಗಿದ್ದು ಅವರೆಲ್ಲರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಮೋಹಿತ್ ಮತ್ತು ಓಂ ಪ್ರಕಾಶ್ ಜಾಗಿದ್ ಹೆಸರಿನ ವ್ಯಕ್ತಿಯನ್ನು ಬಂಧಿಸಲಾಗಿದೆ. ಇನ್ನುಳಿದಂತೆ ಸುಮಿತ್ ಯಾದವ್, ರಾಜೀವ್ ಕುಮಾರ್ ಮತ್ತು ಪ್ರವೀಣ್ ಸಿಂಗ್ ನಿರ್ವಾನ್ಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ನೋಯ್ಡಾದಲ್ಲಿ ಕಂಪನಿಯ ಕಚೇರಿಯಿಂದ 60 ಕೆಜಿ ಡ್ರೈಫ್ರೂಟ್ಸ್ ಮತ್ತು ಕೆಲವು ದಾಖಲೆಗಳು ಸೇರಿದಂತೆ ಎರಡು ಕಾರನ್ನು ವಶ ಪಡಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶ, ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಸೇರಿ ಅನೇಕ ರಾಜ್ಯಗಳ ವ್ಯಾಪಾರಿಗಳಿಗೆ ಈ ಗ್ಯಾಂಗ್ ಮೋಸ ಮಾಡಿರುವುದಾಗಿ ಹೇಳಲಾಗಿದೆ.