ಉಡುಪಿ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶೀಘ್ರವೇ ಭೂಮಿ ಪೂಜನ ನಡೆಯಲಿದೆ. ಆದರೆ ಭವ್ಯ ಮಂದಿರ ನಿಮಾರ್ಣಕ್ಕೆ ನಿಧಿ ಎಷ್ಟು ಸಂಗ್ರಹವಾಗಿದೆ? ನಿಧಿ ಕ್ರೋಢೀಕರಣ ಹೇಗೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಸುಪ್ರೀಂ ಕೋರ್ಟ್ ಆದೇಶದಂತೆ ರಚನೆಯಾದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಯೋಧ್ಯೆಯ ಶಾಖೆಯಲ್ಲಿ ಪ್ರತ್ಯೇಕ ಖಾತೆಯನ್ನು ತೆರೆದಿದೆ. ಕಳೆದ ಫೆಬ್ರವರಿಯಲ್ಲಿ ತೆರೆದಿರುವ ಈ ಖಾತೆಯಲ್ಲಿ ಐದು ತಿಂಗಳಲ್ಲಿ ಸುಮಾರು 4 ಕೋಟಿ ರೂ.ಗಳು ಸಂಗ್ರಹವಾಗಿವೆ ಎಂದು ನಿನ್ನೆ ನಡೆದ ಸಭೆಯಲ್ಲಿ ತಿಳಿಸಲಾಗಿದೆ.
ಪೇಜಾವರ ಮಠದಿಂದ 5ಲಕ್ಷ ರೂ. ಮೂಲಧನ!
ಟ್ರಸ್ಟ್ನ ಖಾತೆಗೆ ಮೂಲಧನವನ್ನು ಪೇಜಾವರ ಮಠವು ನೀಡಿದೆ. ಫೆಬ್ರವರಿ 19ರಂದು ನಡೆದ ಪ್ರಥಮ ಸಭೆಯಲ್ಲಿ ಟ್ರಸ್ಟ್ನ ಸ್ಥಾಪಕ ವಿಶ್ವಸ್ಥ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಚೆಕ್ ಮೂಲಕ 5ಲಕ್ಷ ರೂ.ಗಳನ್ನು ನೀಡಿದ್ದರು. ತಮ್ಮ ಗುರುಗಳಾದ ಹಾಗೂ ಅಯೋಧ್ಯೆ ಶ್ರೀರಾಮಜನ್ಮಭೂಮಿ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಪೇಜಾವರ ಶ್ರೀವಿಶ್ವೇಶತೀರ್ಥರ ಸ್ಮರಣಾರ್ಥ ಮೊದಲ ದೇಣಿಗೆ ಸಂದಾಯವಾಗಿತ್ತು.
ಇದೀಗ ಟ್ರಸ್ಟ್ ಅಯೋಧ್ಯೆಯಲ್ಲಿರುವ 67.703 ಎಕರೆ ಭೂಮಿಯಲ್ಲಿ ಒಟ್ಟು 1300 ಕೋಟಿ ರೂ. ವೆಚ್ಚದಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಹಾಗೂ ಆ ಪರಿಸರದ ಅಭಿವೃದ್ಧಿ ಮಾಡಲು ತೀರ್ಮಾನಿಸಿದೆ. ಇದರಲ್ಲಿ ಮಂದಿರ ನಿರ್ಮಾಣಕ್ಕೆ 300 ಕೋಟಿ ರೂ. ಮತ್ತು ಮಂದಿರ ಸುತ್ತಮುತ್ತಲ ಪರಿಸರದ ಅಭಿವೃದ್ಧಿ, ಮೂಲಭೂತ ಸೌಕರ್ಯಗಳಿಗೆ 1000 ಕೋಟಿ ರೂ. ಮೀಸಲಿಡಲಾಗಿದೆ. ಇದನ್ನು ದೇಶದ ಬೇರೆ ಬೇರೆ ಸಂಸ್ಥೆಗಳ ಸಿಎಸ್ಆರ್ ಫಂಡ್ ಮೂಲಕ ಹಾಗೂ ಪ್ರತಿಯೊಬ್ಬ ರಾಮಭಕ್ತನಿಂದ ಸಂಗ್ರಹಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಈ ನಿಧಿಯನ್ನು ಆನ್ಲೈನ್ ಮೂಲಕವೇ ಒಗ್ಗೂಡಿಸಲು ತೀರ್ಮಾನಿಸಲಾಗಿದೆ.