ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ 35 ಸಾವಿರ ಕೋಟಿ ಹಣಕಾಸು ಅವ್ಯವಹಾರ ; ಡಾ. ಕೆ. ಸುಧಾಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಅವರ 2013- 2018ರ ನಡುವಿನ ರಾಜ್ಯದ ಆಡಳಿತದ ಅವಧಿಯಲ್ಲಿ ಸುಮಾರು 35 ಸಾವಿರ ಕೋಟಿ ರೂಪಾಯಿ ಹಣಕಾಸು ಅವ್ಯವಹಾರ ಆಗಿರುವ ಬಗ್ಗೆ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯಲ್ಲಿ ತಿಳಿಸಲಾಗಿದೆ ಎಂದು ರಾಜ್ಯದ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ|| ಕೆ. ಸುಧಾಕರ್ ಅವರು ತಿಳಿಸಿದರು.

ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತು ನಮ್ಮ ಸರಕಾರದ ವಿರುದ್ಧ ಶೇ 40 ಭ್ರಷ್ಟಾಚಾರದ ಕುರಿತು ಇವರು ಆರೋಪ ಮಾಡುತ್ತಿದ್ದಾರೆ. ಅದರ ಹಿಂದೆ ಸತ್ಯಾಸತ್ಯತೆ ತಿಳಿಸುವುದಾಗಿ ಅವರು ಹೇಳಿದರು. ಅದೇ ಅವಧಿಯಲ್ಲಿ ಡಿ ನೋಟಿಫಿಕೇಶನ್ ಗೆ ರೀಡೂ ಎಂಬ ಪದವನ್ನು ಅನುಕೂಲಸಿಂಧುವಾಗಿ ಬಳಸಲಾಗಿದೆ. ಬೆಂಗಳೂರಿನ 10 ಸಾವಿರ ಕುಟುಂಬಗಳಿಗೆ ಇದರಿಂದ ಅನ್ಯಾಯವಾಗಿದೆ ಎಂದು ದೂರಿದರು. ಇವರ ಅವಧಿಯಲ್ಲಿ 900 ಎಕರೆಗೂ ಹೆಚ್ಚು ಜಾಗವನ್ನು ಡೀನೋಟಿಫಿಕೇಶನ್ ಮಾಡಿದ್ದರು. ಇದೆಲ್ಲವನ್ನೂ ಮುಚ್ಚಿ ಹಾಕಲು ಎಸಿಬಿ ರಚಿಸಲಾಯಿತು ಎಂದು ಆಕ್ಷೇಪಿಸಿದರು.

ಕರ್ನಾಟಕದ ಜನರಿಗೆ ಮಂಕುಬೂದಿ ಎರಚುವ ಕಾಂಗ್ರೆಸ್ ಪಕ್ಷದ ಪ್ರಯತ್ನಕ್ಕೆ ಯಶಸ್ಸು ಸಿಗುವುದಿಲ್ಲ. ಬೆಂಗಳೂರಿನ ಜನರಿಗೂ ನಿಮ್ಮ ಡಿ ನೋಟಿಫಿಕೇಶನ್ ಅನ್ಯಾಯ ಗೊತ್ತಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಗಾರ್ಡನ್ ಸಿಟಿಯನ್ನು ಗಾರ್ಬೇಜ್ ಸಿಟಿ ಮಾಡಲಾಗಿತ್ತು ಎಂದು ಬೆಂಗಳೂರಿನ ನಿವಾಸಿಗಳು ಹೇಳಿದ್ದಾರೆ. 2017ರಲ್ಲಿ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಹತ್ತಿಕೊಂಡು ಮಾಲಿನ್ಯ ಆಗಿತ್ತು. ಸಿದ್ರಾಮಣ್ಣನವರು ಇದು ಪ್ರತಿ ವರ್ಷ ಆಗುತ್ತದೆ ಎಂದು ಹಾರಿಕೆ ಉತ್ತರ ಕೊಟ್ಟಿದ್ದರು. ಆಗ ಆರ್ಮಿ ಬಟಾಲಿಯನ್‍ನ 5 ಸಾವಿರ ಯೋಧರು ಬೆಂಕಿ ಆರಿಸಿದ್ದರು. ಇದು ನಿಮ್ಮ ಇತಿಹಾಸ ಎಂದು ಡಾ|| ಕೆ. ಸುಧಾಕರ್ ಅವರು ಟೀಕಿಸಿದರು.

ಹಾಸಿಗೆ, ದಿಂಬು, ಬಡವರಿಗೆ ಕೊಡುವ ಅನ್ನದಲ್ಲೂ ನಿಮ್ಮ ಭ್ರಷ್ಟಾಚಾರವನ್ನು ನೀವು ಬಿಟ್ಟಿಲ್ಲ. ಇಂದಿರಾ ಕ್ಯಾಂಟೀನ್‍ನಲ್ಲಿ 100 ಜನ ಊಟ ಮಾಡಿದರೆ ಸಾವಿರ ಜನಕ್ಕೆ ಬಿಲ್ ಮಾಡಲಾಗುತ್ತಿತ್ತು. 900 ಜನರ ದುಡ್ಡು ಯಾರಿಗೆ ಹೋಗುತ್ತಿತ್ತು ಎಂದು ಪ್ರಶ್ನಿಸಿದರು.

ಹಿಂದಿನ ಕಾಂಗ್ರೆಸ್ ಸರಕಾರದಲ್ಲಿನ ಸಿದ್ದರಾಮಯ್ಯರ ಬಲಗೈ ಬಂಟ, ಮಾಜಿ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ವೈಟ್ ಟಾಪಿಂಗ್‍ನಲ್ಲಿ 39.80 ಕಿಮೀ ಉದ್ದದ ರಸ್ತೆಯ 292 ಕೋಟಿ ಕಾಮಗಾರಿ ಅಂದಾಜು ಇದ್ದುದನ್ನು, 374 ಕೋಟಿ ರೂಪಾಯಿಗೆ ಕೊಡಲಾಗಿತ್ತು. ಯಾಕೆ 25 ಶೇ ಹೆಚ್ಚಾಗಿ ಕೊಟ್ಟರು? ಹೇಳಿ ಜಾರ್ಜ್ ಅವರೇ ಎಂದು ಕೇಳಿದರು.

9.47 ಕಿಮೀ ರಸ್ತೆಯನ್ನು 75 ಕೋಟಿ ಎಸ್ಟಿಮೇಟ್ ಇದ್ದು, 115 ಕೋಟಿಗೆ ಮಂಜೂರಾತಿ ನೀಡಲಾಗಿತ್ತು. 53.86 ಶೇಕಡಾದಷ್ಟು ಹೆಚ್ಚುವರಿ ಮೊತ್ತಕ್ಕೆ ಯಾಕೆ ಕೊಟ್ಟರು? ಇದರ ದುರುದ್ದೇಶ ಏನು ಎಂದು ಕೇಳಿದರು.

ಬಸವರಾಜ ಬೊಮ್ಮಾಯಿಯವರ ನೇತೃತ್ವದ ನಮ್ಮ ಸರಕಾರವು ಮೇ 2022ರಲ್ಲಿ ಎಸ್ಟಿಮೇಟ್ ಮೇಲೆ ಟೆಂಡರ್ ಪ್ರೀಮಿಯಂ ಅನ್ನು ಶೇ 5ಕ್ಕೆ ಮಿತಿಗೊಳಿಸಿದೆ. 50 ಶೇಕಡಾಕ್ಕಿಂತ ಹೆಚ್ಚು ಹಣ ಹೆಚ್ಚಿಸಿ ಮಂಜೂರಾತಿ ಕೊಟ್ಟ ನೀವು ನಮ್ಮ ಮೇಲೆ ಆರೋಪ ಮಾಡಿದ್ದು ಹೇಗೆ? ಇಂಥ ಅನೇಕ ಕೆಲಸಗಳು ಬಿಬಿಎಂಪಿ, ಬಿಡಿಎ ಮಿತಿಯಲ್ಲಿ ಅಂದಾಜಿಗಿಂತ ಹೆಚ್ಚಾಗಿ ನಡೆದಿವೆ ಎಂದು ಆರೋಪಿಸಿದರು.

ಅಲ್ಪಸಂಖ್ಯಾತರ ಉದ್ಧಾರಕರು ನೀವೇ ಎನ್ನುತ್ತೀರಿ. ವಕ್ಫ್ ಬೋರ್ಡಿನ 29 ಸಾವಿರ ಎಕರೆ ಆಸ್ತಿಯನ್ನು ಯಾರು ಗುಳುಂ ಮಾಡಿದ್ದಾರೆ? 2.6 ಲಕ್ಷ ಕೋಟಿ ಮೌಲ್ಯದ ಆಸ್ತಿ ಇದು. ಅಲ್ಪಸಂಖ್ಯಾತರು, ದಲಿತರಿಗೆ, ಹಿಂದುಳಿದ ಜನಾಂಗ, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲಿಲ್ಲ; ಲ್ಯಾಪ್ ಟಾಪಲ್ಲೂ ಭ್ರಷ್ಟಾಚಾರ, ಪ್ರತಿ ಇಲಾಖೆಯ ಭ್ರಷ್ಟಾಚಾರದಲ್ಲಿ ನೀವೇ ಮುಳುಗಿ ಹೋಗಿದ್ದಿರಿ. ಇವತ್ತು ನೀವು ಯಾವ ನೈತಿಕತೆಯಿಂದ ಹೀಗೆ ಮಾತನಾಡುತ್ತೀರಿ? ಜನರ ಮನಸ್ಸನ್ನು ನಿಮ್ಮ ಕಡೆ ವಾಲಿಸಿಕೊಳ್ಳುವ ಪ್ರಯತ್ನ ಇದು. ಇದು ಒಳ್ಳೆಯದಲ್ಲ ಎಂದರು.

2017ರಲ್ಲಿ ನಿಮ್ಮ ಬಲಗೈ ಬಂಟನ ಮನೆ ಮೇಲೆ ದಾಳಿ ಆದಾಗ ಡೈರಿ ಸಿಕ್ಕಿದೆ, 1 ಸಾವಿರ ಕೋಟಿಗೂ ಹೆಚ್ಚು ಹಣ ನಿಮ್ಮ ಹೈಕಮಾಂಡಿಗೆ ಹೋಗಿದ್ದು ಯಾರ ಹಣ ? ನಿಮ್ಮ ಆಡಳಿತಾವಧಿಯ ಕುರಿತು ಮಾತಮಾಡಬೇಕಿರುವಾಗ ಪಿಎಸ್‍ಐ ಹಗರಣದ ಕುರಿತು ಮಾತನಾಡುತ್ತಿರುವಿರಿ. ತ್ಯಾಜ್ಯ ವಿಲೇವಾರಿಯಲ್ಲೂ ಭ್ರಷ್ಟಾಚಾರವಿದೆ ಎಂದರು.

ಎನ್‍ಸಿಆರ್ ವರದಿ ಆಧರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಕಾನೂನು- ಸುವ್ಯವಸ್ಥೆ ಹದಗೆಟ್ಟಿತ್ತು. ಶೇ 28ರಷ್ಟು ಅಪರಾಧ ಹೆಚ್ಚಾಗಿತ್ತು. 2016ರಲ್ಲಿ ಬೆಂಗಳೂರು ಮಹಿಳೆಯರಿಗೆ ಸುರಕ್ಷಿತವಿರಲಿಲ್ಲ ಎಂದು ವರದಿ ತಿಳಿಸಿದೆ. ಬಡವರಿಗೆ ಮನೆ ಕಟ್ಟುವ ಯೋಜನೆಯಡಿ 250 ಕೋಟಿ ಹಗರಣ ಆಗಿತ್ತು. ಬಡವರನ್ನೂ ಬಿಟ್ಟಿಲ್ಲ ನೀವು ಎಂದು ಆಕ್ಷೇಪಿಸಿದರು.

5 ವರ್ಷದಲ್ಲಿ ನೀವು ಕೇವಲ 42 ಕಿಮೀ ಮೆಟ್ರೋ ಕಾಮಗಾರಿ 13,845 ಕೋಟಿ ಹಣದಲ್ಲಿ ಮಾಡಿದ್ದೀರಿ ಅಲ್ಲವೇ? ಸುಗಮ ಸಂಚಾರಕ್ಕೆ ನೀವು ಮಾಡಿದ್ದೇನು? ನಾವು (ಮುಖ್ಯಮಂತ್ರಿಗಳು) ಕೇವಲ ಆಡಳಿತಾತ್ಮಕ ಸುಧಾರಣೆ ಮಾಡಿ ವಿಶೇಷ ಅಧಿಕಾರಿ ನೇಮಿಸಿದ್ದಾರೆ. ಮೆಟ್ರೋ 3ನೇ ಹಂತ 44 ಕಿಮೀ, 2ನೇ ಹಂತ 19.7 ಕಿಮೀ ನಾವು ಕೈಗೆತ್ತಿಕೊಂಡಿದ್ದೇವೆ. ಮೆಟ್ರೋಗೆ ವಿಶೇಷ ಅಭಿವೃದ್ಧಿ- ವೇಗದ ಸ್ಪರ್ಶವನ್ನು ನಮ್ಮ ಸರಕಾರ ಕೊಟ್ಟಿದೆ ಎಂದು ವಿವರಿಸಿದರು.

ನಮ್ಮ ರೈತ ವಿದ್ಯಾನಿಧಿ ಸ್ಕೀಂನಡಿ 10 ಲಕ್ಷ ಮಕ್ಕಳಿಗೆ 439 ಕೋಟಿ ವಿತರಣೆ ಆಗಿದೆ. ರೈತರು, ನೇಕಾರರು, ಆಟೋ ಚಾಲಕರ ಮಕ್ಕಳಿಗೆ ಪ್ರಯೋಜನ ಆಗಿದೆ. 3 ಲಕ್ಷ ಹೊಸ ರೈತರಿಗೆ ಸಾಲ ನೀಡುವ ಪ್ರಯತ್ನ ನಡೆದಿದೆ. ರೈತ ಶಕ್ತಿ ಯೋಜನೆಯಡಿ 400 ಕೋಟಿ ರೂಪಾಯಿ ಡೀಸೆಲ್ ಸಬ್ಸಿಡಿ ಕೊಡುತ್ತಿದ್ದೇವೆ. ನಗರ ಪ್ರದೇಶದ ಬಡವರಿಗಾಗಿ 438 ನಮ್ಮ ಕ್ಲಿನಿಕ್‍ಗಳನ್ನು ತೆರೆದಿದ್ದೇವೆ. ಇಡೀ ರಾಜ್ಯದ ಜನರಿಗೆ ಕೋವಿಡ್‍ನಿಂದ ಮುಕ್ತಿ ಸಿಗುವಂಥ ಪರಿಣಾಮಕಾರಿ ಕಾರ್ಯಕ್ರಮ ಕೊಟ್ಟಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಹೆಚ್ಚಳ, ಕಡ್ಡಾಯವಾಗಿ 2 ಡೋಸ್ ಲಸಿಕೆ ಕೊಡಲಾಗಿದೆ. 12 ಕೋಟಿಯಷ್ಟು ಲಸಿಕೆ ಕೊಟ್ಟಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದಿಂದ ಆರು ಸಾವಿರ, ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ 4 ಸಾವಿರ ಸೇರಿಸಿ 9968 ಕೋಟಿಯನ್ನು 53.83 ಲಕ್ಷ ರೈತರಿಗೆ ಕೊಡಲಾಗಿದೆ ಎಂದು ವಿವರಿಸಿದರು.

ನೀವು ಪರಿಶಿಷ್ಟ ವರ್ಗ, ಪಂಗಡದ ಚಾಂಪಿಯನ್ ಎಂದು ಹೇಳುತ್ತೀರಲ್ಲ? ಹಾಗೆಂದರೆ ಏನು? ಏನು ಮಾಡಿದ್ದೀರಿ? ಮೀಸಲಾತಿ ಹೆಚ್ಚಳದ ಅಹವಾಲು ಇದ್ದರೂ ಅದನ್ನು ಮಾಡಿಲ್ಲ. ಬಿಜೆಪಿ ಮೀಸಲಾತಿ ಹೆಚ್ಚಿಸಿದೆ. ವೀರಶೈವ ಲಿಂಗಾಯಿತರು, ಒಕ್ಕಲಿಗರಿಗೂ ಮೀಸಲಾತಿ ಕೊಡುತ್ತಿದ್ದೇವೆ. ನಿಮ್ಮಿಂದ ಈ ವರ್ಗದವರಿಗೆ ನ್ಯಾಯ ಸಿಕ್ಕಿದೆಯೇ ಎಂದು ಕೇಳಿದರು.

ಕೋವಿಡ್ ಬಂದ ಬಳಿಕ ಪ್ರಧಾನಿಯವರು ದೇಶದ 80 ಕೋಟಿ ಜನರಿಗೆ ಗರೀಬ್ ಕಲ್ಯಾಣ್ ಯೋಜನೆಯಡಿ ಅಕ್ಕಿ ಕೊಡುತ್ತಿದ್ದಾರೆ. ಹೊರದೇಶಗಳಲ್ಲಿ ಆಹಾರ, ಲಸಿಕೆ ಇಲ್ಲದೆ ಸಮಸ್ಯೆ ಆಗಿತ್ತು. ಮೋದಿಯವರು ನಮ್ಮ ದೇಶ ಮಾತ್ರವಲ್ಲದೆ 50ರಷ್ಟು ಬೇರೆ ದೇಶದವರಿಗೂ ಲಸಿಕೆ ಕಳುಹಿಸಿಕೊಟ್ಟರು. ಕಂದಾಯ ಇಲಾಖೆಯಡಿ ದಾಖಲೆ ಕೆಲಸ ನಡೆಯುತ್ತಿದೆ. ಎಸಿ ಕಚೇರಿಗಳು ಕಲೆಕ್ಷನ್ ಸೆಂಟರ್ ಆಗಿದ್ದವು, ರೈತರು ಸಮಸ್ಯೆಯಲ್ಲಿದ್ದರು. 79 ಎಬಿಯನ್ನು ರದ್ದು ಮಾಡಿದ್ದರಿಂದ ಸುಗಮವಾಗಿ ನೋಂದಣಿ ನಡೆಯುತ್ತಿದೆ ಎಂದರು.

ಕಳೆದ ಬಾರಿ ತಾಂಡಾಗಳ ಹಕ್ಕುಪತ್ರ ಕೊಡಲಾಗಿದೆ. ಬ್ರಿಟಿಷರ ಕಾಲದಿಂದಲೂ ಈ ಸಮಸ್ಯೆ ಇತ್ತು. 100 ವರ್ಷಗಳಿಂದ ಇದ್ದ ಬೇಡಿಕೆ ಇದಾಗಿತ್ತು. ನಮ್ಮ ಸರಕಾರ ಬಂದು 1 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಶಾಶ್ವತವಾಗಿ ಸ್ವಾಭಿಮಾನದ ಬದುಕು ಕಲ್ಪಿಸಲು ನೆರವಾಗಿದ್ದೇವೆ ಎಂದು ವಿವರಿಸಿದರು.

ನಮ್ಮ ಸರಕಾರವು 100 ಅಂಬೇಡ್ಕರ್ ವಿದ್ಯಾರ್ಥಿನಿಲಯ, 50 ಕನಕದಾಸ ವಿದ್ಯಾರ್ಥಿ ನಿಲಯ ನಿರ್ಮಿಸುತ್ತಿದೆ. 134 ವರ್ಷಗಳ ಇತಿಹಾಸದಲ್ಲೇ ಗರಿಷ್ಠ ಮಳೆ, ಪ್ರವಾಹ ಬಂದಾಗ ಕ್ಷಿಪ್ರ ಗತಿಯಲ್ಲಿ ಪರಿಹಾರ ಕೊಡಲಾಗಿದೆ. ಬೆಳೆ ನಷ್ಟಕ್ಕೆ ಡಬಲ್ ಪರಿಹಾರವನ್ನು ಕೇವಲ ಒಂದು ವಾರದಲ್ಲಿ ಕೊಟ್ಟಿದ್ದೇವೆ. ಅನೇಕ ಕಾರ್ಯಕ್ರಮಗಳನ್ನು ರಚನಾತ್ಮಕವಾಗಿ ಬದ್ಧತೆಯಿಂದ ಕೊಟ್ಟಿದ್ದೇವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 50-60 ಅಧಿಕೃತ ಪ್ರಕರಣ ದಾಖಲಾದಾಗ ತನಿಖೆಯ ಭಯ ಭೀತಿಯಿಂದ ಎಸಿಬಿ ಆರಂಭಿಸಿದ ಖ್ಯಾತಿ ಕಾಂಗ್ರೆಸ್ ಪಕ್ಷದ್ದು. ಇದನ್ನು ಸದನದಲ್ಲಿ ಚರ್ಚಿಸದೆ, ಯಾರೂ ಕೇಳದೆ, ಎಲ್ಲ ಪಕ್ಷಗಳು ಸೇರಿ ಮಾಡಿದ ನಿರ್ಧಾರ ಇದಲ್ಲ. ರಾತ್ರೋರಾತ್ರಿ ಲೋಕಾಯುಕ್ತ ಮುಚ್ಚಿ ಎಸಿಬಿ ಮಾಡಿದ್ದರು ಎಂದು ಆರೋಪಿಸಿದರು.

ಲೋಕಾಯುಕ್ತ ಮುಚ್ಚಿದ್ದಕ್ಕೆ ಕೋರ್ಟ್ ಛೀಮಾರಿ ಹಾಕಿದೆ. ಕರ್ನಾಟಕದ ಲೋಕಾಯುಕ್ತ ಸಂಸ್ಥೆ ವಿಶೇಷ ಸ್ಥಾನಮಾನವನ್ನು ಹೊಂದಿದೆ. ಅದು ಮುಂದುವರಿಯಬೇಕು ಎಂದಿತ್ತು. ನಾವು ನಮ್ಮ ಪ್ರಣಾಳಿಕೆಯಲ್ಲೂ ಲೋಕಾಯುಕ್ತ ಪುನರ್ ಸ್ಥಾಪನೆ ಮಾಡುವುದಾಗಿ ತಿಳಿಸಿದ್ದೆವು. ನಾವು ಹೈಕೋರ್ಟ್ ತೀರ್ಪನ್ನು ಒಪ್ಪಿಕೊಂಡು ಲೋಕಾಯುಕ್ತ ಪುನರ್ ಸ್ಥಾಪಿಸಿದ್ದೇವೆ. ಭ್ರಷ್ಟಾಚಾರ ನಿರ್ಮೂಲನೆಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಅಹರ್ನಿಶಿ ದುಡಿಯುವ ಮಾದರಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ವಿವರಿಸಿದರು.

ಸರಕಾರಿ ಶಾಲೆಗೆ ಗರಿಷ್ಠ ಕೊಠಡಿ ನಿರ್ಮಿಸುತ್ತಿದ್ದೇವೆ. 15 ಸಾವಿರ ಶಿಕ್ಷಕರ ನೇಮಕಾತಿ ನಡೆದಿದೆ. ಕಾಂಗ್ರೆಸ್, ಇತರ ಪಕ್ಷದವರೂ ನಮ್ಮ ಕ್ಲಿನಿಕ್ ಉದ್ಘಾಟನೆಗೆ ಬಂದಿದ್ದರು. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಉದ್ಯೋಗ, ಕೃಷಿ- ಇವೆಲ್ಲಕ್ಕೂ ವಿಶೇಷ ಅಭಿವೃದ್ಧಿಯ ಸ್ಪರ್ಶ ಕೊಟ್ಟಿದ್ದೇವೆ ಎಂದು ತಿಳಿಸಿದರು.

11,500 ಪೌರಕಾರ್ಮಿಕರ ಕೆಲಸ ಖಾಯಂ ಆಗಿದೆ. ನಾವು ಹೇಳಿದಷ್ಟೂ ಮುಗಿಯದ ಕೆಲಸಗಳನ್ನು ಮಾಡಿದ್ದೇವೆ ಮತ್ತು ಜನರಿಗೆ ನಮ್ಮ ಮೇಲೆ ನಂಬಿಕೆ ಇದೆ ಹಾಗಾಗಿ ಮತ್ತೆ ಬಿಜೆಪಿ ಸರ್ಕಾರ ಬರಲಿದೆ ಎಂದು ನುಡಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!