ಹೊಸ ದಿಗಂತ ವರದಿ, ಮೇಲುಕೋಟೆ :
ನೈಜ ಪ್ರೀತಿಗೆ ವಯಸ್ಸು ದೊಡ್ಡದಲ್ಲ ಎಂಬುದಕ್ಕೆ ಮೇಲುಕೋಟೆ ಯತಿರಾಜದಾಸರ್ ಗುರು ಪೀಠದಲ್ಲಿ ನಡೆದ ಅಪರೂಪದ ವಿವಾಹ ಸಾಕ್ಷಿಯಾಗಿದ್ದು, 65 ವರ್ಷ ವಯಸ್ಸಿನ ವರ 55 ವರ್ಷದ ವಧು ಜೋಡಿಯಾಗಿ ಹಸೆಮಣೆಯೇರಿದ್ದು ಮರು ದಾಂಪತ್ಯಕ್ಕೆ ಕಾಲಿಟ್ಟು ವಿವಾಹ ಮಹೋತ್ಸವದ ಸಂಭ್ರಮಾ ಚರಣೆ ಮಾಡಿದ್ದಾರೆ.
ಮೂಲತಃ ಹೊಳೆ ನರಸೀ ಪುರದವರಾದ ಚಿಕ್ಕಣ್ಣ ಹಿಂದೆ ಮೈಸೂರಿನಲ್ಲಿ ಕೂಲಿಕೆಲಸ ಮಾಡುತ್ತಿದ್ದ ವೇಳೆ ಅತ್ತೆ ಮಗಳಾದ ಜಯಮ್ಮಳನ್ನು ಪ್ರೇಮಿಸುತ್ತಿದ್ದರು. ಪ್ರೇಮಿಗಳ ಈ ವಿವಾಹ ಪ್ರಸ್ತಾಪ ಒಪ್ಪದ ವದುವಿನ ಕುಟುಂಬ ಜಯಮ್ಮ ಳಿಗೆ ಬೇರೆ ವಿವಾಹ ಮಾಡಿದ್ದರು. ಅಂದು ಸತಿಪತಿಯಾಗುವ ಭಾಗ್ಯ ತಪ್ಪಿಹೋಗಿದ್ದು , 35 ವರ್ಷಗಳ ನಂತರ ಪ್ಲವನಾಮ ಸಂವತ್ಸರದ ಕಾರ್ತಿಕ ಮಾಸದ ಸ್ವಾತಿನಕ್ಷತ್ರದ ದಿನ ಗುರುವಾರದಂದು ಜೋಡಿ ಇದೀಗ ಸತಿಪತಿಗಳಾಗಿದ್ದಾರೆ. ಸ್ಥಾನಾ ಚಾರ್ಯ ಶ್ರೀನಿವಾಸ ನರಸಿಂ ಹನ್ ಗುರೂಜಿ ಸಾರಥ್ಯದಲ್ಲಿ ನಡೆದ ಸರಳವಿವಾಹ ಕಾರ್ಯಕ್ರಮದಲ್ಲಿ ಪ್ರೇಮಿಗಳಿಬ್ಬರೂ ಒಂದಾಗಿದ್ದು, ದಾಂಪತ್ಯ ಜೀವನವನ್ನು ಸುಖಕರವಾಗಿಡು ಎಂದು ಆರಾಧ್ಯದೈವ ಚೆಲುವನಾರಾಯಣಸ್ವಾಮಿ ಮತ್ತು ವಿಜಯಲಕ್ಷ್ಮಿ ದೇವಿಯಲ್ಲಿ ಮನಸಾರೆ ಪ್ರಾರ್ಥನೆ ಸಲ್ಲಿಸಿದ್ದಾರೆ
ಚಿಕ್ಕವಯಸ್ಸಿನಲ್ಲಿ ಪ್ರೇಮಿಗಳಾಗಿದ್ದ ಇವರಿಬ್ಬರಿಗೆ ಕಂಕಣ ಬಲ ಕೂಡಿ ಬರದಿದ್ದರೂ ಜಯಮ್ಮ ಮಾತ್ರ ಬೇರೆ ಮದುವೆಯಾಗಿದ್ದರು. ವಿವಾಹ ಬಂಧನ ಯಶಸ್ವಿಯಾಗದೆ ಅವರ ಪತಿ ಜಯಮ್ಮರನ್ನು ತೊರೆದುಹೋಗಿದ್ದರು. ಆದರೆ 35 ವರ್ಷ ಕಳೆದರೂ ಚಿಕ್ಕಣ್ಣ ಜಯಮ್ಮ ನೆನಪಲ್ಲೇ ಮದುವೆಯನ್ನೇ ಆಗಿರಲಿಲ್ಲ. ಈಚೆಗೆ ಇಬ್ಬರೂ ಭೇಟಿಯಾಗಿ ವಿವಾಹವಾಗಲು ನಿಶ್ಚಯಿಸಿದ ಇಳಿವಯಸ್ಸಿನ ಜೋಡಿಗಳು ಮೇಲುಕೋಟೆಯಲ್ಲಿ ಮದುವೆಯಾಗಿ ಮರು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಇಳಿವಯಸ್ಸಿನಲ್ಲಾದರೂ ಒಂದಾಗಿ ನೆಮ್ಮದಿಯ ಜೀವನ ಮಾಡಬೇಕೆಂಬ ಉದ್ದೇಶದಿಂದ ಮದುವೆಯಾಗಿದ್ದೇವೆ.
ಇದಕ್ಕೆ ಅಪಾರ್ಥ ಕಲ್ಪಿಸದೆ ನಮ್ಮನ್ನು ಹರಸಿ ಬದಕಲು ಪ್ರೋತ್ಸಾಹಿಸಿ ಎಂದು ಮನವಿಮಾಡುತ್ತಾರೆ. ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ ಈ ವಿವಾಹವೇ ಸಾಕ್ಷಿಯಾಗಿದ್ದು, ಮರು ದಾಂಪತ್ಯಜೀವನ ಸುಖಕರವಾಗಿರಲಿ ಎಂದು ಹಾರೈಸೋಣ.