ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೋಟ್ಯಂತರ ರೂಪಾಯಿ ಸಾಲ ಕೊಡಿಸುವ ಆಮಿಷವೊಡ್ಡಿ ವಂಚಿಸುತ್ತಿದ್ದ ಜಾಲವನ್ನು ಬೆಂಗಳೂರುಸಿಸಿಬಿ ಪೊಲೀಸರು ಭೇದಿಸಿದ್ದು, ಪ್ರಮುಖ ಆರೋಪಿ ಎ. ಹರಿ ನಾಡರ್ ಅಲಿಯಾಸ್ ಹರಿ ಗೋಪಾಲಕೃಷ್ಣ ನಾಡರ್ ಎಂಬಾತನನ್ನು ಬಂಧಿಸಿದ್ದಾರೆ.
ಕೇರಳದ ಹರಿ, ತನ್ನದೇ ರಾಜ್ಯದ ರಂಜಿತ್ ಪಣಿಕ್ಕರ್ ಹಾಗೂ ಇತರರ ಜೊತೆ ಸೇರಿ ಕೃತ್ಯ ಎಸಗಿದ್ದು, ಆತನ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯಿಂದ ಎರಡು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, 8.75 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದೂ ಹೇಳಿದ್ದಾರೆ.
ಆರೋಪಿಗಳು, ನಗರದ ಉದ್ಯಮಿ ವೆಂಕಟರಮಣಿ ಶಾಸ್ತ್ರಿ ಎಂಬುವರಿಗೆ 360 ಕೋಟಿ ಸಾಲ ಕೊಡಿಸುವ ಆಮಿಷವೊಡ್ಡಿದ್ದರು. ಸಾಲಕ್ಕೆ ಸೇವಾ ಶುಲ್ಕವೆಂದು 7.20 ಕೋಟಿ ಪಡೆದುಕೊಂಡಿದ್ದರು. ಅದಾದ ನಂತರ ಆರೋಪಿಗಳು ಸಾಲ ಕೊಡಿಸದೇ ನಾಪತ್ತೆಯಾಗಿದ್ದರು ಎಂದು ತಿಳಿಸಿದ್ದಾರೆ.