Thursday, August 18, 2022

Latest Posts

4 ತಿಂಗಳ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ತಯಾರಕರಿಂದ ಪ್ರತಿಭಟನೆ

ಮೈಸೂರು: ಕಳೆದ ನಾಲ್ಕು ತಿಂಗಳಿoದ ಬಿಸಿಯೂಟ ತಯಾರಿಕರಿಗೆ ನೀಡಬೇಕಾಗಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ವತಿಯಿಂದ ಬುಧವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಧರಣಿ ನಡೆಸಿ, ನಾನಾ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.  ಬಿಸಿಯೂಟ ತಯಾರಕರಿಗೆ ಏಪ್ರೀಲ್, ಮೇ ತಿಂಗಳ ಹಾಗೂ ಜೂನ್ ಜುಲೈ ತಿಂಗಳ ವೇತನ ಸೇರಿದಂತೆ ನಾಲ್ಕು ತಿಂಗಳ ವೇತನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಕ್ಷರ ದಾಸೋಹ ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರು ಕಳೆದ ಹದಿನೇಳು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು ಒಂದು ಲಕ್ಷದ ಹದಿನೆಂಟು ಸಾವಿರದಷ್ಟಿರುವ ಬಿಸಿಯೂಟ ತಯಾರಕರು ಕನಿಷ್ಟ ವೇತನದ ಕಾಯ್ದೆಗೆ ಒಳಪಡದೆ ಗೌರವ ಸಂಭಾವನೆಯಾಗಿ ಮುಖ್ಯ ಅಡುಗೆಯವರು ೨೭೦೦ ಮತ್ತು ಸಹಾಯಕ ಅಡುಗೆಯವರು ೨೬೦೦ರೂ.ಪಡೆಯುತ್ತಿದ್ದಾರೆ. ಈ ಗೌರವ ಸಂಭಾವನೆಯಲ್ಲಿ ಬಿಸಿಯೂಟ ತಯಾರಕರು ಇಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂದರ್ಭದಲ್ಲಿ ಜೀವನ ಮಾಡುವುದು ಕಷ್ಟವಾಗಿದೆ.
ಬಿಸಿಯೂಟ ತಯಾರಕರು ಗೌರವ ಸಂಭಾವನೆಗಾಗಿ ದುಡಿಯುತ್ತ ತಮ್ಮ ಹಲವಾರು ಬೇಡಿಕೆಗಳಾದ ಕೆಲಸ ಖಾಯಂಗೊಳಿಸಿ, ಕನಿಷ್ಠ ವೇತನ ಕೊಡಿ, ಇಎಸ್ ಐ,ಪಿಎಫ್ ನಿವೃತ್ತಿ ವೇತನ, ಇಡಗಂಟು ಹಣ, ಅಪಘಾತ ಪರಿಹಾರ, ಮರಣ ಪರಿಹಾರ ಜಾರಿಗೊಳಿಸುವಂತೆ, ಕಳೆದ ೧೭ ವರ್ಷದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ನಿರಂತರವಾಗಿ ಹೋರಾಟ ಚಳುವಳಿ ಒತ್ತಾಯ ಮಾಡುತ್ತಾ ಬಂದರೂ ಸಂಭಾವನೆಯಲ್ಲಿ ಏರಿಕೆ ಹೊರತುಪಡಿಸಿ, ಮತ್ಯಾವುದೇ ಸೌಲತ್ತುಗಳನ್ನು ಸರ್ಕಾರ ಜಾರಿ ಮಾಡಿಲ್ಲ ಎಂದು ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಶೈಕ್ಷಣಿಕ ವರ್ಷದ ಕೊನೆಯಲ್ಲಿ ದೇಶಕ್ಕೆ ಆವರಿಸಿದ ಕೋವಿಡ್-೧೯ ಪರಿಣಾಮವಾಗಿ ಬಿಸಿಯೂಟ ತಯಾರಕರು ತೀವ್ರ ಸಂಕಷ್ಟ ಅನುಭವಿಸುವಂತಾಯಿತು. ಇತ್ತಶಾಲೆಗಳಲ್ಲಿ ಅಡುಗೆ ಕೆಲಸವೂ ಇಲ್ಲದೆ, ಅತ್ತ ಬೇರೆ ಕಡೆ ಕೂಲಿಯೂ ಇಲ್ಲದೆ ಬಿಸಿಯೂಟ ತಯಾರಕರು ಪರಿತಪಿಸುತ್ತಿದ್ದಾರೆ. ಕೋವಿಡ್-೧೯ ಲಾಕ್ ಡೌನ್ ಪರಿಣಾಮವಾಗಿ ರಾಜ್ಯದ ಇತರೆ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಐದುಸಾವಿರ ರೂ.ಪರಿಹಾರ ಹಣ ದೊರೆತು, ಆ ಕಾರ್ಮಿಕರಿಗೆ ಸಹಾಯವಾಯಿತು. ಅದರಂತೆ ಬಿಸಿಯೂಟ ತಯಾರಕರಿಗೂ ಲಾಕ್ ಡೌನ್ ಪರಿಹಾರದ ಹಣ ದೊರೆತಿದ್ದರೆ, ಅವರೂ ಎರಡು ಹೊತ್ತಿನ ಊಟ ಮಾಡಬಹುದಿತ್ತು. ಬಿಸಿಯೂಟ ತಯಾರಕರಿಗೆ ಕಳೆದ ನಾಲ್ಕು ತಿಂಗಳಿನಿAದ ಯಾವುದೇ ಲಾಕ್ ಡೌನ್ ಪರಿಹಾರವಿಲ್ಲದೆ ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ಆದ್ದರಿಂದ ಎಪ್ರೀಲ್-ಮೇ ತಿಂಗಳ ಲಾಕ್ ಡೌನ್ ಪರಿಹಾರವನ್ನು ಮತ್ತಯು ಜೂನ್ ಜುಲೈ ತಿಂಗಳ ವೇತನ ಸೇರಿದಂತೆ ನಾಲ್ಕು ತಿಂಗಳ ವೇತನ ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಫೆಡರೇಷನ್ ಸಂಚಾಲಕರಾದ ವೈ.ಮಹದೇವಮ್ಮ, ಕೆ.ಜಿ.ಸೋಮರಾಜೇ ಅರಸ್, ಪದ್ಮಮ್ಮ, ಸಾವಿತ್ರಮ್ಮ, ಸರಸ್ವತಿ, ಜಯಂತಿ ಮತ್ತಿತರರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!