ಹೊಸದಿಗಂತ ವರದಿ, ಮಂಗಳೂರು:
ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳವಾರ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಪೋಷಕರ ಭಯದಿಂದ ಮನೆ ಬಿಟ್ಟಿದ್ದ ಮಕ್ಕಳು ಖಾಸಗಿ ಬಸ್ ಮೂಲಕ ಮಂಗಳೂರಿಗೆ ಆಗಮಿಸಿದ್ದು, ಮಂಗಳೂರಿನ ರಿಕ್ಷಾ ಚಾಲಕರು ಮಕ್ಕಳ ಬಗ್ಗೆ ಸಂಶಯ ಹೊಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್, ನಾಲ್ವರು ಮಕ್ಕಳು ಒಂದೇ ಲೇಔಟ್ ನ ನಿವಾಸಿಗಳು. ಎಲ್ಲರೂ ಒಟ್ಟಿಗೆ ಆಡಲು ಹೋಗುತ್ತಿದ್ದರು.
ಆದರೆ ಇವರ ಸ್ನೇಹ ಮನೆಯವರಿಗೆ ಹಿಡಿಸಿರಲಿಲ್ಲ. ಹೀಗಾಗಿ ಮಕ್ಕಳಿಗೆ ಪೋಷಕರು ತಮ್ಮನ್ನು ಹಾಸ್ಟೆಲ್ ಗೆ ಹಾಕುವ ಭಯವಾಗಿದೆ. ಇದರಿಂದಾಗಿ ಎಲ್ಲರೂ ಒಟ್ಟಿಗೆ ಯಾವುದಾದರೂ ಹಳ್ಳಿಗೆ ಹೋಗಿ ವಾಸಿಸುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಯಾಣಕ್ಕೆ ಎಲ್ಲರೂ ಮನೆಯಿಂದ ಹಣ ತಂದಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ಮೂಲಕ ಬಂದಿದ್ದಾರೆ. ತಮ್ಮ ಗುರುತನ್ನು ಯಾರೂ ಪತ್ತೆ ಹಚ್ಚಬಾರದೆಂದು ಸಿಮ್ ಕಾರ್ಡ್, ಮೈ ಮೇಲಿದ್ದ ಚಿನ್ನಾಭರಣವನ್ನು ಮಂಗಳೂರಿನ ಖಾಸಗಿ ಬಸ್ ನಿಲ್ದಾಣ ದ ಡಸ್ಟ್ ಬಿನ್ ಗೆ ಎಸೆದಿದ್ದಾರೆ. ಪೊಲೀಸರು ಈ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಕ್ಕಳು ಸಿಕ್ಕಿರುವ ಬಗ್ಗೆ ಈಗಾಗಲೇ ಬೆಂಗಳೂರು ಡಿಸಿಪಿಗೆ ಮಾಹಿತಿ ನೀಡಿದ್ದೇವೆ. ಬೆಂಗಳೂರಿನಿಂದ ಹೆತ್ತವರು ಮಂಗಳೂರಿಗೆ ಬರುತ್ತಿದ್ದಾರೆ. ಸಣ್ಣ ಮಕ್ಕಳನ್ನು ಹೆತ್ತವರ ಜೊತೆ ಕಳುಹಿಸುತ್ತೇವೆ. ಆದರೆ ತಂಡದಲ್ಲಿನ ಯುವತಿ ವಿರುದ್ದ ಕಾನೂನು ಕ್ರಮಕ್ಕೆ ನಿರ್ಧರಿಸಲಾಗಿದೆ ಎಂದು ಡಿಸಿಪಿ ಹೇಳಿದರು.