Tuesday, July 5, 2022

Latest Posts

40 ಡಿಗ್ರಿ ಸೆಲ್ಸಿಯಸ್‌ ನತ್ತ ದಾಪುಗಾಲಿಡುತ್ತಿದೆ ತಾಪಮಾನ…?

ಕಾಸರಗೋಡು: ಬಿಸಿಲ ಧಗೆ ಹೆಚ್ಚುತ್ತಿದ್ದು, ಇದರಿಂದ ಜನರು ಜಾಗ್ರತೆ ಪಾಲಿಸುವಂತೆ ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ. ಸಾಮಾನ್ಯವಾಗಿ ಮಾರ್ಚ್‌ನಿಂದ ಬೇಸಿಗೆ ಬೇಗೆ ಹೆಚ್ಚುತ್ತಿದೆ. ಆದರೆ ಈ ವರ್ಷ ಉಂಟಾದ ಹವಾಮಾನ ವೈಪರೀತ್ಯದ ಪರಿಣಾಮ ಫೆಬ್ರವರಿ ತಿಂಗಳಲ್ಲೇ ಬಿಸಿಲ ಧಗೆ ಆರಂಭವಾಗಿದೆ.

ಜಿಲ್ಲೆಯಲ್ಲಿ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದು ಹಲವು ರೋಗಗಳಿಗೆ ದಾರಿ ಮಾಡಿಕೊಡುತ್ತಿದೆ. ವಿಶೇಷವಾಗಿ ಮಕ್ಕಳು ಮತ್ತು ಹಿರಿಯ ನಾಗರಿಕರು ಈ ಬಗ್ಗೆ ಹೆಚ್ಚಿನ ಜಾಗ್ರತೆ ಪಾಲಿಸಬೇಕು. ಆಹಾರ ಸೇವನೆ ಮತ್ತು ಜೀವನ ಶೈಲಿಯ ರೀತಿಯಲ್ಲೂ ಅಗತ್ಯದ ಕ್ರಮೀಕರಣ ತರಬೇಕೆಂದೂ ಆರೋಗ್ಯ ಇಲಾಖೆ ತಿಳಿಸಿದೆ. ಬಿಸಿಲ ಬೇಗೆ ಹೆಚ್ಚಾಗಿ ಸೂರ್ಯಾಘಾತಕ್ಕೊಳಗಾಗಿ ಸುಟ್ಟ ಗಾಯಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಹಳದಿ ಕಾಮಲೆ, ಸಿಡುಬು, ಕೆಂಗಣ್ಣು, ಕಾಲರಾ ಟೈಫಾಯ್ಡ್ ಇತ್ಯಾದಿ ರೋಗಗಳು ಬೇಸಿಗೆಯಲ್ಲೇ ಹೆಚ್ಚಾಗಿ ಹರಡುತ್ತವೆ.

ಇಂತಹ ರೋಗ ತಗಲದಿರಲು ಧಾರಾಳ ನೀರು ಕುಡಿಯಬೇಕು. ನಸು ಬಣ್ಣದ, ಹೆಚ್ಚು ದಪ್ಪವಿಲ್ಲದ ಹತ್ತಿ ನಿರ್ಮಿತ ಉಡುಪುಗಳನ್ನು ಧರಿಸಬೇಕು. ಮನೆ ಇತ್ಯಾದಿಗಳ ಕೊಠಡಿಗಳ ಬಾಗಿಲನ್ನು ವಾಯು ಸಂಚಾರಕ್ಕಾಗಿ ಸದಾ ತೆರೆದಿಡಬೇಕು. ಶಾಲಾ ಮಕ್ಕಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು ಲಭಿಸುವಂತೆ ಮಾಡಬೇಕು.

ಆರೋಗ್ಯದಲ್ಲಿ ಏರುಪೇರಾದರೆ ಪರೀಕ್ಷೆ ಅಗತ್ಯ!: ಉತ್ತಮ ಪೋಷಕಾಂಶ ಹೊಂದಿರುವ ಆಹಾರ ಸೇವಿಸಬೇಕು. ಧಾರಾಳವಾಗಿ ಹಣ್ಣುಹಂಪಲನ್ನು  ಸೇವಿಸಬೇಕು. ಸಾಕು ಪ್ರಾಣಿಗಳನ್ನು  ನೆರಳಿನ ಜಾಗದಲ್ಲಿ ಕೂಡಿ ಹಾಕಬೇಕು. ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರಿನ ಸೌಕರ್ಯ ಏರ್ಪಡಿಸಬೇಕು. ಬಿಸಿಲ ಬೇಗೆಯಿಂದ ದೈಹಿಕ ದಣಿವು ಅಥವಾ ಇತರ ಆರೋಗ್ಯ ಸಮಸ್ಯೆಗಳ ಅನುಭವ ಉಂಟಾದಲ್ಲಿ ತಕ್ಷಣ ಆಸ್ಪತ್ರೆಗೆ ತೆರಳಿ ವೈದ್ಯರಿಂದ ತಜ್ಞ ತಪಾಸಣೆಗೊಳಪಡಿಸಬೇಕೆಂದು ವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.

ಅರೋಗ್ಯ ಇಲಾಖೆಯಿಂದ ಸೂಚನೆ: ದಿನದಿಂದ ದಿನಕ್ಕೆ ತಾಪಮಾನ ಏರುತ್ತಿರುವ ಹಿನ್ನಲೆಯಲ್ಲಿ ಹಿರಿಯ ನಾಗರಿಕರು, ಗರ್ಭಿಣಿಯರು, ಮಕ್ಕಳು ಬೆಳಗ್ಗೆ 11 ಗಂಟೆಯಿಂದ ಅಪರಾಹ್ನ 3 ಗಂಟೆಯ ತನಕ ಬಿಸಿಲು ತಗಲದಂತೆ ಜಾಗ್ರತೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೇ ಆರೋಗ್ಯದ ಬಗ್ಗೆ ಕಾಳಚಿ ವಹಿಸಲು ಕೆಲ ಸೂಚನೆಯನ್ನು ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss