Wednesday, August 10, 2022

Latest Posts

400 ಗ್ರಾಂ ಚಿನ್ನದ ಒಡೆವೆಗೆ ಉಂಡೆ ನಾಮ?

ರಾಮನಗರ: ಮಣ್ಣಿಪುರಂ ಗೋಲ್ಡ್ ಲೋನ್, ಚನ್ನಪಟ್ಟಣ ರೈಲ್ವೆ ನಿಲ್ದಾಣ ರಸ್ತೆ, ಶಾಖೆಯು ಹಣ ಪಡೆದು ಗಿರವಿ ಇಟ್ಟಿದ್ದ ಸುಮಾರು ೪೦೦ ಗ್ರಾಂ ಚಿನ್ನದ ಒಡವೆಗಳನ್ನು ಕೊಡದೇ ವಂಚಿಸಿ ಅನ್ಯಾಯ ಮಾಡಿದ್ದಾರೆ ಎಂದು ಗ್ರಾಹಕ ತಾಲ್ಲೂಕಿನ ನಾಗವಾರ ಗ್ರಾಮದ ಚೇತನ್‌ಕುಮಾರ್ ಬಿನ್ ಲೇಟ್ ಜಯಣ್ಣ ಅವರು ಆರೋಪಿಸಿದ್ದಾರೆ. ಮಣ್ಣಿಪುರಂ ಗೋಲ್ಡ್ ಲೋನ್ ಶಾಖೆಯಿಂದ ಆಗಿರುವ ವಂಚನೆ,ಅನ್ಯಾಯವನ್ನು ಖಂಡಿಸಿ ಬ್ಯಾಂಕ್‌ನ ಶಾಖಾ ಕಛೇರಿ ಮುಂದೆ ಪ್ರತಿಭಟನೆ ಮಾಡಿದ ಗ್ರಾಹಕ ಮತ್ತು ಕುಟುಂಬದವರು ಮಣ್ಣಿಪುರಂ ಗೋಲ್ಡ್ ಲೋನ್ ಶಾಖೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿಯವರ ಕರ್ತವ್ಯಲೋಪ ಹಾಗೂ ನಿರ್ಲಕ್ಷö್ಯದ ವಿರುದ್ಧ ಕಿಡಿಕಾರಿ, ಆಗಿರುವ ಅನ್ಯಾಯವನ್ನು ಸರಿಪಡಿಸಿ ಗಿರವಿ ಇಟ್ಟಿರುವ ನನ್ನ ಚಿನ್ನದ ಒಡವೆಗಳನ್ನು ಕೊಡಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಹಿನ್ನೆಲೆ: ತಮ್ಮ ಕುಟುಂಬದ ನಿರ್ವಹಣೆ ಮತ್ತು ಸ್ವಂತ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಕಳೆದ ೨ ವರ್ಷಗಳ ಹಿಂದೆ ೭ ವಿವಿಧ ಚಿನ್ನದ ಐಟಂಗಳು ಸೇರಿದಂತೆ ಒಟ್ಟು ೪೦೦ ಗ್ರಾಂ ಚಿನ್ನದ ಒಡವೆಗಳನ್ನು ಮಣಿಪುರ ಗೋಲ್ಡ್ ಲೋನ್ ಶಾಖೆಯಲ್ಲಿ ಅಡವಿಟ್ಟು ಒಟ್ಟು ೪.೫೦ ಲಕ್ಷ ರೂ.ಸಾಲವನ್ನು ಪಡೆದಿದ್ದೆನು ಎಂದು ತಾಲ್ಲೂಕಿನ ನಾಗವಾರ ಗ್ರಾಮದ ರೈತ ಗ್ರಾಹಕ ಚೇತನ್‌ಕುಮಾರ್ ಬಿನ್ ಲೇಟ್ ಜಯಣ್ಣ ಪತ್ರಿಕೆಯೊಂದಿಗೆ ಮಾತನಾಡುತ್ತಾ ತಿಳಿಸಿದರು. ಕಳೆದ ನಾಲ್ಕು ತಿಂಗಳ ಹಿಂದೆ ಇದೇ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಗ್ರಾಮಕ್ಕೆ ಬಂದು, ನಿಮ್ಮ ಒಡವೆಗಳನ್ನು ಬಿಡಿಸಿ ಕೊಳ್ಳಿ, ಸಾಲದ ರಿನಿವಲ್ ಮಾಡಿಸಿ ಕೊಳ್ಳಿ ಎಂದು ಹೇಳಿದ್ದರಿಂದ ನಾನು ಸಾಲ ಸೋಲ ಮಾಡಿ ಹಣ ಹೊಂದಿಸಿ ಎರಡು ಕಂತಿನಲ್ಲಿ ೪ ಲಕ್ಷ ೫ ಸಾವಿರ ರೂ.ಗಳನ್ನು ಪಾವತಿಸಿದೆ. ಪೂರ್ತಿ ಹಣ ಪಾವತಿಸಿ ಅಡವಿಟ್ಟಿದ್ದ ಚಿನ್ನದ ಒಡವೆಗಳನ್ನು ಬಿಡಿಸಿ ಕೊಳ್ಳಲು ಬಂದಾಗ, ನಿಮಗೆ ನೋಟೀಸ್ ನೀಡಿದ್ದೇವೆ, ಒಡವೆ ಬಿಡಿಸಿ ಕೊಂಡಿದ್ದೀರಿ ಎಂದು ಒಮ್ಮೆ ಹೇಳಿದರೆ, ಮತ್ತೊಮ್ಮೆ ಒಡವೆಗಳನ್ನು ಹರಾಜು ಹಾಕಲಾಗಿದೆ ಎಂದು ನಮ್ಮನ್ನು ವಂಚಿಸಲು ಯತ್ನಿಸಿ ದಿಕ್ಕುತಪ್ಪಿಸುವ ಕೆಲಸ ಮಾಡಿದರು.ನಾನು ಒಡವೆಗಳನ್ನು ಬಿಡಿಸಿ ಕೊಂಡಿಲ್ಲ. ನೋಟೀಸ್ ಸಹ ಬಂದಿಲ್ಲ. ಇದು ಹೇಗೆ ಎಂದು ಪ್ರಶ್ನಿಸಿ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಡುತ್ತೇನೆ ಎಂದು ಹೇಳಿದೆ. ಈ ವಿಚಾರವನ್ನು ಬಿಲ್ಡಿಂಗ್ ಮಾಲೀಕ ರಾಮಚಂದ್ರು ಅವರ ಗಮನಕ್ಕೆ ತಂದೆನು. ಅವರೂ ಸಹ ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿ ಸರಿಪಡಿಸುವ ಭರವಸೆ ನೀಡಿದರು. ಮೇನೇಜರ್ ಪೊಲೀಸ್ ಠಾಣೆಗೆ ದೂರು ಕೊಡುವುದು ಬೇಡ. ಈ ಬಗ್ಗೆ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಕಳೆದ ೨೦ ದಿನಗಳ ಹಿಂದೆ ಬಂದು ಕೇಳಿದಾಗ, ಬ್ಯಾಂಕ್ ವ್ಯವಸ್ಥಾಪಕರು ಮತ್ತು ವಿಚಾರಣಾಧಿಕಾರಿಗಳು ನಮ್ಮ ಅಹವಾಲನ್ನು ಕೇಳಿ, ದಾಖಲೆಗಳನ್ನು ಪರಿಶೀಲಿಸಿ, ನಿಮಗೆ ಅನ್ಯಾಯವಾಗಿರುವುದು ಕಂಡು ಬರುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಡುವ ಭರವಸೆ ನೀಡಿದ್ದರು. ನಂತರ ಇದರಲ್ಲಿ ಕರ್ತವ್ಯ ಲೋಪವೆಸಗಿದರೆನ್ನಲಾದ ಬ್ಯಾಂಕ್ ಸಿಬ್ಬಂದಿಗಳಾದ ಜಗದೀಶ್, ಮಹೇಶ್,ಜಯಶ್, ಧನಂಜಯ ಹಾಗೂ ಮಾನಸ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎನ್ನುತ್ತಾರೆ. ಅದು ನಮಗೆ ತಿಳಿಯದು. ಆ ಸಿಬ್ಬಂದಿ ಮಾತ್ರ ಇಲ್ಲಿ ಇಲ್ಲ. ಬ್ಯಾಂಕ್ ಅಧಿಕಾರಿಗಳು ತಿಳಿಸಿದಂತೆ ನಾನು, ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇಂದು ಬ್ಯಾಂಕ್‌ಗೆ ಬಂದರೂ ಅವರು ಬಂದಿಲ್ಲ. ಬ್ಯಾಂಕ್ ಮುಂದೆ ಬಂದು ಕುಳಿತರೂ ಬ್ಯಾಂಕ್‌ಗೆ ಏರಿಯಾ ವ್ಯವಸ್ಥಾಪಕರು, ವಿಚಾರಣಾಧಿಕಾರಿಗಳು ಬಂದಿಲ್ಲ. ಪೋನ್ ಕರೆ ಸ್ವೀಕರಿಸುತ್ತಿಲ್ಲ. ಆದರೂ ಪೊಲೀಸ್ ಠಾಣೆಗೆ ಹೋಗಿ ಗ್ರಾಹಕರು ಕರ್ತವ್ಯಕ್ಕೆ ಅಡ್ಡಿ ಪಡಿಸಿ ಗಲಾಟೆ ಮಾಡುತ್ತಿದ್ದಾರೆ ಎಂದು ನಮ್ಮ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿ, ಪೊಲೀಸ್ ಠಾಣೆಗೆ ಬರುವಂತೆ ಹೇಳುತ್ತಿದ್ದಾರೆ. ಇದು ಯಾವ ನ್ಯಾಯ. ಆಗಿರುವ ಅನ್ಯಾಯವನ್ನು ಕೇಳುವುದು ತಪ್ಪೆ, ರೈತರು, ಬಡವರು ಕಷ್ಟ ಎಂದು ತಮ್ಮ ಒಡವೆಗಳನ್ನು ಅಡವಿಡುವುದು ತಪ್ಪೆ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿ, ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ, ಆಗಿರುವ ಅನ್ಯಾಯವನ್ನು ಸರಿಪಡಿಸಿ, ಅಡವಿಟ್ಟಿರುವ ೪೦೦ ಗ್ರಾಂ ಚಿನ್ನದ ಒಡವೆಗಳನ್ನು ಕೊಡಿಸಿ ಕೊಡಬೇಕು. ಮುಂದೆ ಈ ರೀತಿ ಆಗದಂತೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss