ಗುರು ತೇಜ್ ಬಹದ್ದೂರ್ 400ನೇ ಜನ್ಮದಿನ: ಕೆಂಪುಕೋಟೆಯಿಂದ ಇದೇ ಮೊದಲಬಾರಿ ಪ್ರಧಾನಿ ರಾತ್ರಿ ಭಾಷಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾತ್ರಿ 9.15 ಕ್ಕೆ ಸಿಖ್ ಗುರು ತೇಜ್ ಬಹದ್ದೂರ್ ಅವರ 400ನೇ ಜನ್ಮದಿನಾಚರಣೆ ಪ್ರಯುಕ್ತ ಐತಿಹಾಸಿಕ ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನ ಮಂತ್ರಿಗಳು ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವುದು ವಾಡಿಕೆ. ಇಂದು ಪ್ರಧಾನಿಯವರ ಭಾಷಣವನ್ನು ಕೆಂಪುಕೋಟೆಯಲ್ಲಿ ಆಯೋಜಿಸಿರುವುದರ ಹಿಂದೆ ಬಲವಾದ ಕಾರಣವೂ ಇದೆ. ಮೊಘಲ್ ದೊರೆ ಔರಂಗಜೇಬ 1675 ರಲ್ಲಿ ಒಂಬತ್ತನೇ ಸಿಖ್ ಗುರು ಗುರು ತೇಜ್ ಬಹದ್ದೂರ್ ಅವರನ್ನು ಗಲ್ಲಿಗೇರಿಸಲು ಆದೇಶ ನೀಡಿದ್ದ ಸ್ಥಳ ಇದಾಗಿದೆ. ಆದ್ದರಿಂದ ಜನರಿಗೆ ಶಾಂತಿ- ಸಹಿಷ್ಣತೆಗಳ ಸಂದೇಶವನ್ನು ರವಾನಿಸಲು ಇದೇ ಸೂಕ್ತವಾದ ಸ್ಥಳವೆಂದು ಕೆಂಪು ಕೋಟೆಯನ್ನು ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ ಎಂದು ಎಂದು ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಮೋದಿಯವರು ಸೂರ್ಯಾಸ್ತದ ನಂತರ ಕೆಂಪುಕೋಟೆಯಿಂದ ಭಾಷಣ ಮಾಡುತ್ತಿರುವ ದೇಶದ ಮೊದಲ ಪ್ರಧಾನಿ ಎನಿಸಿಕೊಳ್ಳುತ್ತಿದ್ದಾರೆ.
ದೆಹಲಿಯ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಸಹಯೋಗದಲ್ಲಿ ಕೇಂದ್ರಸರ್ಕಾರವು ಕೆಂಪುಕೋಟೆಯಲ್ಲಿ ಎರಡು ದಿನಗಳ ಕಾಲ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ. 400 ಸಿಖ್‌ ಸಂಗೀತಕಾರರು ಮತ್ತು ಮಕ್ಕಳು ‘ಶಾಬಾದ್ ಕೀರ್ತನೆ’ಗಳನ್ನು ಹಾಡಲಿದ್ದಾರೆ. ಮತ್ತು ಗುರು ತೇಜ್ ಬಹದ್ದೂರ್ ಅವರ ಜೀವನವನ್ನು ಬಿಂಬಿಸುವ ಭವ್ಯವಾದ ಬೆಳಕು ಮತ್ತು ಧ್ವನಿ ಪ್ರದರ್ಶನವೂ ನಡೆಯಲಿದೆ.
ಇದಲ್ಲದೇ ಸಿಖ್ಖರ ಸಾಂಪ್ರದಾಯಿಕ ಸಮರ ಕಲೆ ‘ಗಟ್ಕಾ’ ಪ್ರದರ್ಶನವನ್ನು ಸಹ ಆಯೋಜಿಸಲಾಗಿದೆ. ಧರ್ಮ ಮತ್ತು ಮಾನವೀಯ ಮೌಲ್ಯಗಳು, ಆದರ್ಶಗಳು ಮತ್ತು ತತ್ವಗಳನ್ನು ರಕ್ಷಿಸಲು ತನ್ನ ಜೀವನವನ್ನು ತ್ಯಾಗ ಮಾಡಿದ ಒಂಬತ್ತನೇ ಸಿಖ್ ಗುರು ಗುರು ತೇಜ್ ಬಹದ್ದೂರ್ ಅವರ ಬೋಧನೆಗಳನ್ನು ಎತ್ತಿ ತೋರಿಸುವುದರ ಮೇಲೆ ಕಾರ್ಯಕ್ರಮವು ಕೇಂದ್ರೀಕೃತವಾಗಿದೆ. ಕಾಶ್ಮೀರಿ ಪಂಡಿತರ ಧಾರ್ಮಿಕ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದಕ್ಕಾಗಿ ಗುರು ತೇಜ್ ಬಹದ್ದೂರ್ ಅವರನ್ನು ಮೊಘಲ್ ದೊರೆ ಔರಂಗಜೇಬನ ಆದೇಶದ ಮೇರೆಗೆ ಗಲ್ಲಿಗೇರಿಸಲಾಗಿತ್ತು.
ಅವರ ಮರಣ ವಾರ್ಷಿಕೋತ್ಸವವನ್ನು ಪ್ರತಿ ವರ್ಷ ನವೆಂಬರ್ 24 ರಂದು ‘ಶಾಹೀದಿ ದಿವಸ್’ ಎಂದು ಸ್ಮರಿಸಲಾಗುತ್ತದೆ. ತೇಜ್ ಬಹದ್ದೂರ್ ಅವರ ಜನ್ಮದಿನಾಚರಣೆ ಸಂಬಂಧ ಏ.24 ರಂದು ಹರ್ಯಾಣದಲ್ಲಿಯೂ ಬಿಜೆಪಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!