ಹೊಸ ದಿಗಂತ ಆನ್ ಲೈನ್ ಡೆಸ್ಕ್:
ದೇಶೀ ಕ್ರಿಕೆಟಿನಲ್ಲಿ ಜಾರ್ಖಂಡ್ ಹೊಸ ದಾಖಲೆಯೊಂದನ್ನು ಸ್ಥಾಪಿಸಿದೆ. ನಾಯಕ ಇಶಾನ್ ಕಿಶನ್ ಅವರ ಶರವೇಗದ ಶತಕದ ನೆರವಿನಿಂದ ನಿಗದಿತ 50 ಓವರುಗಳಲ್ಲಿ 422 ರನ್ ಗಳಿಸುವ ಮೂಲಕ ದೇಶೀ ಕ್ರಿಕೆಟಿನಲ್ಲಿ ಅತ್ಯಧಿಕ ರನ್ ಸಂಪಾದಿಸಿದ ಹೊಸ ದಾಖಲೆ ಬರೆದಿದೆ.
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಈ ದಾಖಲೆ ಸೃಷ್ಟಿಯಾಯಿತು. ಜಾರ್ಖಂಡ್ನ ಈ ಮೊತ್ತದಲ್ಲಿ ಪ್ರಮುಖ ಕೊಡುಗೆ ನಾಯಕ ಇಶಾನ್ರದ್ದು. ಅವರು ಕೇವಲ 94 ಎಸೆತಗಳಲ್ಲಿ 173 ರನ್ ಗಳಿಸಿದರು. ಅವರು ದ್ವಿಶತಕ ಬಾರಿಸುವ ಉಜ್ವಲ ಅವಕಾಶವಿತ್ತಾದರೂ ಅದನ್ನು ಕಳಕೊಂಡರು. ಅವರು ಔಟಾಗುವಾಗ ಇನ್ನಿಂಗ್ಸ್ನ 28 ಓವರುಗಳಷ್ಟೆ ಮುಗಿದಿದ್ದು, ತಾಳ್ಮೆ ವಹಿಸಿ ಆಡಿದ್ದರೆ ದ್ವಿಶತಕ ಬಾರಿಸಬಹುದಿತ್ತು. ಅವರ ಇನ್ನಿಂಗ್ಸ್ನಲ್ಲಿ 19 ಬೌಂಡರಿ ಹಾಗೂ 11 ಸಿಕ್ಸರ್ಗಳಿದ್ದವು. ಅವರ ಅರ್ಧ ಶತಕವು 42 ಎಸೆತಗಳಲ್ಲಿ, ಶತಕವು 74 ಎಸೆತಗಳಲ್ಲಿ ಹಾಗೂ 150 ರನ್ಗಳು 86 ಎಸೆತಗಳಲ್ಲಿ ದಾಖಲಾದವು.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಇಶಾನ್ 2020ರ ಐಪಿಎಲ್ ಟೂರ್ನಿಯಲ್ಲಿ 516 ರನ್ಗಳೊಂದಿಗೆ ಅತ್ಯಧಿಕ ಸ್ಕೋರುದಾರರಾಗಿ ಮೂಡಿಬಂದಿದ್ದರು.