ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೇಂದ್ರ ಸರಕಾರವು ನೇರ ಲಾಭ ವರ್ಗಾವಣಾ ಯೋಜನೆ (ಡಿಬಿಟಿ)ಯಡಿ ದೇಶಾದ್ಯಂತ ರೈತರ ಖಾತೆಗಳಿಗೆ 49,965ಕೋ.ರೂ.ಗಳನ್ನು ವರ್ಗಾಯಿಸಿದೆ . ಪಂಜಾಬ್ ಒಂದರಲ್ಲೇ ರೈತರ ಖಾತೆಗೆ ಗೋದಿ ಬೆಂಬಲ ಯೋಜನೆಯಡಿ 12,588ಕೋ.ರೂ.ಗಳನ್ನು ಮತ್ತು ಹರ್ಯಾಣದಲ್ಲಿ 11,784ಕೋ.ರೂ.ಗಳನ್ನು ವರ್ಗಾಯಿಸಿದೆ.
ಅಲ್ಲದೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯಲ್ಲಿ ಈವರೆಗೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 2 ಕೋಟಿ ಫಲಾನುಭವಿಗಳಿಗೆ ಒಂದು ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ವಿತರಿಸಿದೆ.ಹಾಗೆಯೇ ಮೇ ತಿಂಗಳ ವೇಳಾಪಟ್ಟಿಯ ಪ್ರಕಾರ ಆಹಾರ ಧಾನ್ಯಗಳ ವಿತರಣೆ ನಡೆಯುತ್ತಿದೆ ಮತ್ತು ಈವರೆಗೆ 15.55 ಲ.ಮೆ. ಟನ್ ಆಹಾರ ಧಾನ್ಯಗಳನ್ನು 34 ರಾಜ್ಯಗಳು ಮತ್ತು ಕೇಂದ್ರಾಡಳಿತಗಳು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಡಿಪೋಗಳಿಂದ ಪಡೆದಿವೆ.3ನೇ ಹಂತದ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ದೇಶದ 80 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ವರ್ಚುವಲ್ ಪತ್ರಿಕಾಗೋಷ್ಠಿಯ ಮೂಲಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇಲಾಖೆ 2021 ಮೇ ಮತ್ತು ಜೂನ್ ಎರಡು ತಿಂಗಳುಗಳವರೆಗೆ ಪಿಎಂಜಿಕೆಎವೈ-3 ಯೋಜನೆಯ ಅನುಷ್ಠಾನಗೈದಿದೆ. ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕಿಲೋಗ್ರಾಂಗಳಷ್ಟು ಹೆಚ್ಚುವರಿ ಉಚಿತ ಆಹಾರ ಧಾನ್ಯಗಳನ್ನು ಇದರಡಿ ಒದಗಿಸಲಾಗುತ್ತಿದೆ ಎಂದಿದ್ದಾರೆ.
ಮುಂದಿನ ತಿಂಗಳು ಅಂತ್ಯದ ವೇಳೆಗೆ ಮೇ ಮತ್ತು ಜೂನ್ ತಿಂಗಳುಗಳಿಗೆ ಪಿಎಂಜಿಕೆ -3 ಆಹಾರ ಧಾನ್ಯಗಳ ವಿತರಣೆಯನ್ನು ಪೂರ್ಣಗೊಳಿಸುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಲಾಗಿದೆ .32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒನ್ ರ್ಯಾಂಕ್ ಒನ್ ಪೆನ್ಶನ್ ಯೋಜನೆ ಜಾರಿಯಾಗಿದೆ. ಇದರ ಅಡಿಯಲ್ಲಿ ಮಾಸಿಕ ಸರಾಸರಿ 1.5ರಿಂದ 1.6 ಕೋಟಿ ಸಾಮರ್ಥ್ಯದ ವಹಿವಾಟುಗಳನ್ನು ದಾಖಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ಆಗಸ್ಟ್ನಲ್ಲಿ ಈ ಯೋಜನೆ ಪ್ರಾರಂಭವಾದಾಗಿನಿಂದ ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 26.3 ಕೋಟಿಗೂ ಹೆಚ್ಚು ಪೋರ್ಟಬಿಲಿಟಿ ವ್ಯವಹಾರಗಳು ನಡೆದಿವೆ ಎಂದಿದ್ದಾರೆ.