ಹೊಸದಿಗಂತ ಆನ್ ಲೈನ್ ಡೆಸ್ಕ್:
ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅವುಗಳನ್ನು ವಿಡಿಯೋ ಚಿತ್ರೀಕರಿಸಿ ಡಾರ್ಕ್ ವೆಬ್ಗಳಲ್ಲಿ ಹಂಚಿಕೊಳ್ಳುತ್ತಿದ್ದ ಕಿರಿಯ ಎಂಜಿನಿಯರ್ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಆರೋಪಿಯು ಉತ್ತರ ಪ್ರದೇಶದ ನೀರಾವರಿ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಈತ ಚಿತ್ರಕೂಟ, ಹಮಿರ್ಪುರ್ ಹಾಗೂ ಬಾಂದಾ ಜಿಲ್ಲೆಗಳಲ್ಲಿ 5 ವರ್ಷದಿಂದ 16 ವರ್ಷ ವಯಸ್ಸಿನ ಸುಮಾರು 50 ಮಕ್ಕಳನ್ನು ಲೈಂಗಿಕ ಶೋಷಣೆಗೆ ಒಳಪಡಿಸಿದ್ದ ಎನ್ನಲಾಗಿದೆ.
ಬಾಲಕಿಯರ ಲೈಂಗಿಕ ಶೋಷಣೆಯ ಜತೆಗೆ ಆರೋಪಿ ತಮ್ಮ ಹೀನ ಕೃತ್ಯಗಳನ್ನು ವಿಡಿಯೋ ಮತ್ತು ಪೊಟೋ ತೆಗೆಯುತ್ತಿದ್ದ. ಇವುಗಳನ್ನು ಅಂತರ್ಜಾಲದ ವಿವಿಧ ತಾಣಗಳಿಗೆ ರವಾನಿಸುತ್ತಿದ್ದ ಹಾಗೂ ಡಾರ್ಕ್ ವೆಬ್ ಮೂಲಕ ಜಗತ್ತಿನಾದ್ಯಂತ ಮಾರಾಟ ಮಾಡಿದ್ದ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಸಿಬಿಐನ ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಯು ತನ್ನ ಚಟುವಟಿಕೆಯ ಕುರಿತು ವಿವರ ಸೀಡಿದ್ದು, ಬಡತನದಲ್ಲಿರುವ ಮಕ್ಕಳನ್ನು ಇಂತಹ ಹೀನ ಕೃತ್ಯಕ್ಕೆ ಬಳಸಿಕೊಂಡು ಗುಟ್ಟಾಗಿ ಕಾರ್ಯಾಚರಿಸಿರುವುದಾಗಿ ಹೇಳಿದ್ದಾನೆ.
ಆರೋಪಿಯನ್ನು ಬಾಂದಾದಲ್ಲಿ ಸಿಬಿಐ ತಂಡ ಬಂಧಿಸಿದ್ದು, ಅವನ ನಿವಾಸದಲ್ಲಿ ಇದ್ದ ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್, ವೆಬ್ ಕ್ಯಾಮೆರಾಗಳು ಹಾಗೂ ಪೆನ್ಡ್ರೈವ್, ಮೆಮೋರಿ ಕಾರ್ಡ್ಗಳು ಸೇರಿದಂತೆ ಇತರೆ ವಿದ್ಯುನ್ಮಾನ ಸಂಗ್ರಹ ಉಪಕರಣಗಳ ಜತೆಗೆ ಎಂಟು ಲಕ್ಷ ರೂ ನಗದನ್ನು ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.