ಹೊಸ ದಿಗಂತ ವರದಿ, ಮೈಸೂರು:
ರಾಜಕಾರಣಿಗಳ ಸಿಡಿ ಇದೆ ಎನ್ನುವವರನ್ನು ಮೊದಲು ಒದ್ದು ಏರೋಪ್ಲೇನ್ ಹತ್ತಿಸಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಡಿ ಇದೆ ಎಂದು ಕೆಲವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಇದು ಬ್ಲ್ಯಾಕ್ ಮೇಲ್ ನ ಕಾರ್ಯತಂತ್ರ. ಇದಕ್ಕೆ ಪುಷ್ಠಿ ಕೊಟ್ಟು ಬೆಳೆಸಬೇಡಿ. ಅದ್ಯಾರೋ ಒಬ್ಬ ಮಾಜಿ ಸಿಎಂ ಅದೆಲ್ಲೋ ಹೋಗಿ ಬರುತ್ತಾರೆ. ಅದರ ಸಿಡಿ ನನ್ನ ಬಳಿ ಇದೆ ಅಂತಾನೆ. ರಾಜ್ಯದಲ್ಲಿ ದೇವೇಗೌಡ, ಎಸ್ಎಂ ಕೃಷ್ಣ ಹಾದಿಯಾಗಿ ತುಂಬಾ ಜನ ಇದ್ದಾರೆ. ಯಾರು ಆ ಮಾಜಿ ಸಿಎಂ ಎಂದು ಬಾಯಿ ಬಿಡಿಸಿ. ಸುಮ್ಮನೆ ನಾವು ಹೊರಗೆ ಓಡಾಡುವಾಗ ಮುಜುಗರ ತರಬೇಡಿ.
ಬ್ಲಾಕ್ ಮೇಲ್ ಮಾಡುವವರನ್ನು ಬಂಧಿಸಿ ಎಂದು ಆಗ್ರಹಿಸಿದರು.
ಹಿಂದೆ ಅದ್ಯಾವುದೋ ನಿರೂಪಕಿ ವಿಚಾರದಲ್ಲೂ ನನ್ನ ಹೆಸರು ತಂದರು. ಆಗ ಸರಿಯಾಗಿ ಜಾಡಿಸಿದ್ದೇನೆ. ನನಗೆ ಈ ವಿಚಾರದಲ್ಲಿ ಯಾವುದೇ ಭಯ ಇಲ್ಲ. ಈ ಪ್ರಕರಣದಲ್ಲಿ ನಾನು ತುಂಬಾ ಕ್ಲೀನ್ ಆಗಿದ್ದೇನೆ. ಆದರೆ ನನ್ನ ಉದ್ದೇಶ ಇಂತಹ ಬ್ಲ್ಯಾಕ್ ಮೇಲ್ ಗಳು ನಿಲ್ಲಬೇಕು. ಇಂತಹ ಪ್ರಕರಣಗಳು ಹೇಸಿಗೆ ಬರುವಂತ ಸ್ಥಿತಿ ನಿರ್ಮಾಣ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ 5 ಕೋಟಿಯ ಡೀಲ್ ನಡೆದಿದೆ. ಇದು ನನಗಿರುವ ಮೂಲಗಳ ಮಾಹಿತಿ ಪ್ರಕಾರ ಕಳೆದು ಮೂರು ತಿಂಗಳಿoದ ಈ ಡೀಲ್ ವ್ಯವಹಾರ ನಡೆದಿದೆ. ದೊಡ್ಡ ದೊಡ್ಡವರೇ ಈ ಪ್ರಕರಣದಲ್ಲಿ ಇದ್ದಾರೆ. ಇದನ್ನು ತನಿಖೆ ಮಾಡಿಸುವ ಜವಾಬ್ದಾರಿ ಸರ್ಕಾರದ್ದು ಎಂದರು.
ನಾನು ಈ ಪ್ರಕರಣ ನೋಡಿ ಖುಷಿ ಪಡುವವನಲ್ಲ. ಸರ್ಕಾರ ಬೀಳಿಸಿದರು ಎನ್ನುವ ಕಾರಣಕ್ಕೆ ನಾನು ಒಂದು ಕಲ್ಲು ಹೊಡೆಯಬೇಕು ಅಂತ ಹೊಡೆಯೋದಿಲ್ಲ. ಇದೀಗ ಹಲವು ರೀತಿಯ ವ್ಯಾಖ್ಯಾನ ಶುರುವಾಗಿದೆ. ಪ್ರಕರಣ ಹಳ್ಳ ಹಿಡಿಯುವಂತದ್ದು ಏನು, ಆ ಮಂತ್ರಿನಾ ರಾಜೀನಾಮೆ ಕೊಡಿಸಬೇಕೆಂಬ ಉದ್ದೇಶ ಇತ್ತು. ಇದೀಗ ಆ ರಾಜೀನಾಮೆ ಕೊಡಿಸುವಲ್ಲಿ ಅವರು ಸಫಲರಾಗಿದ್ದಾರೆ. ಇದೀಗ ಆ ಹೆಣ್ಣು ಮಗಳನ್ನ ಕಟ್ಟಿಕೊಂಡು ಅವರಿಗೆ ಏನು?, ಅವರಿಬ್ಬರೇ ವಿಡಿಯೋ ಮಾಡಿಕೊಂಡಿದ್ದಾರೆ. ಆದರೆ ಆ ವಿಡಿಯೋ ಹೊರಗೆ ಕೊಟ್ಟವರು ಯಾರು? ಗೊತ್ತಿಲ್ಲ. ಇಂತಹ ವಿಚಾರದಲ್ಲಿ ಸುಮ್ಮನ್ನೇ ಕಲ್ಲು ಹೊಡೆಯಬಾರದು ಎಂದರು.
ಇವತ್ತು ರಾಜಕೀಯ ತುಂಬಾ ಕಲುಷಿತವಾಗಿದೆ. ಕೆಸರು ನಮ್ಮ ಮೇಲೆ ನಾವೇ ಎರಚಿಕೊಂಡ ಹಾಗೆ. ಇಂತಹ ಪ್ರಕರಣದಿಂದ ನಮ್ಮನ್ನು ಜನ ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಮೊದಲು ಸಿಡಿ ಇಟ್ಟುಕೊಂಡು ಹೆದರಿಸುವಂತವರನ್ನ ಒದ್ದು ಒಳಗೆ ಹಾಕಿ ಎಂದು ಕಿಡಿಕಾರಿದರು.
ಒನ್ ನೇಷನ್ ಒನ್ ಎಲೆಕ್ಷನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊದಲು ಹಣದಿಂದ ಚುನಾವಣೆ ನಡೆಯೋದು ನಿಲ್ಲಲ್ಲಿ. ಚುನಾವಣೆಯ ವ್ಯವಸ್ಥೆಯ ಲೋಪ ಬದಲಾಗಲಿ. ಹಣವಿದ್ದವರಿಗೆ ಮಾತ್ರ ಚುನಾವಣೆ ಅನ್ನೋದು ನಿಲ್ಲಬೇಕು. ಆಮೇಲೆ ಮಾತಾಡೋಣ. ನನ್ನನ್ನು ಒಳಗೊಂಡoತೆ ಬಿಜೆಪಿ, ಕಾಂಗ್ರೆಸ್ ಆತ್ಮ ವಿಮರ್ಶೆ ಮಾಡಬೇಕು. ಒನ್ ನೇಷನ್ ಒನ್ ಎಲೆಕ್ಷನ್ ವಿಚಾರದಲ್ಲಿ ಕಾಂಗ್ರೆಸ್ ಯೂ ಟರ್ನ್ ಹೊಡೆದಿದೆ. ಈ ವಿಚಾರದ ಚರ್ಚೆಯಲ್ಲಿ ಕಾಂಗ್ರೆಸ್ ಮೊದಲು ಭಾಗವಹಿಸಿತ್ತು. ಆ ನಂತರ ಸದನದಲ್ಲಿ ಯು ಟರ್ನ್ ಹೊಡೆಯಿತು. ಇದು ಯಾಕೇ ಅಂತ ಗೊತ್ತಾಗಲಿಲ್ಲ. ಪ್ರಸ್ತುತ ರಾಜಕಾರಣದ ಸ್ಥಿತಿ ಪ್ರಜಾಪ್ರಭುತ್ವದ ವ್ಯವಸ್ಥೆ ಬುಡಮೇಲು ಮಾಡಲಿದೆ. ಮೊದಲು ಅದು ಕೊನೆಯಾಗಬೇಕು ಎಂದು ನುಡಿದರು.