ಹೊಸ ದಿಗಂತ ವರದಿ ಕೊಡಗು:
ಕೊಡವ ಹಾಕಿ ಹಬ್ಬಕ್ಕೆ ರೂ.5 ಕೋಟಿ ಅನುದಾನವನ್ನು ಪ್ರತಿ ಬಜೆಟ್ ನಲ್ಲಿ ಮೀಸಲಿಡಬೇಕು, ಕೊಡಗಿನಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕು ಮತ್ತು ಕುಲ್ಲೇಟಿರ ಹಾಕಿ ಹಬ್ಬದ ಬಾಕಿ ಹಣ 40 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣ ಗೌಡ ಅವರಿಗೆ ಕೊಡವ ಸಮಾಜಗಳ ನಿಯೋಗ ಮನವಿ ಸಲ್ಲಿಸಿದೆ.
ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಹಾಗೂ ಸಮಾಜ ಸೇವಕ ತೇಲಪಂಡ ಶಿವಕುಮಾರ್ ನಾಣಯ್ಯ ಅವರ ಮುಂದಾಳತ್ವದಲ್ಲಿ ಬೆಂಗಳೂರು ಹಾಗೂ ನಾಪೋಕ್ಲು ಕೊಡವ ಸಮಾಜದ ಪ್ರತಿನಿಧಿಗಳು ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಕಳೆದ 21 ವರ್ಷಗಳಿಂದ ಕೊಡಗಿನಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ಹಾಕಿ ಹಬ್ಬದಲ್ಲಿ ಪ್ರತಿವರ್ಷ 6 ಸಾವಿರಕ್ಕೂ ಅಧಿಕ ಆಟಗಾರರು ಪಾಲ್ಗೊಳ್ಳುತ್ತಿದ್ದು, ಈ ಆಟಗಾರರಲ್ಲಿ ಪ್ರತಿಭಾವಂತರು ಈಗಾಗಲೇ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಆಟವಾಡಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತಂದವರಿದ್ದಾರೆ.
ಪ್ರತಿವರ್ಷ ನಡೆಯುವ ವಿಶ್ವದ ಗಮನ ಸೆಳೆದಿರುವ ಈ ಕ್ರೀಡಾಕೂಟಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗುವುದರಿಂದ ಬಜೆಟ್ನಲ್ಲಿ 5 ಕೋಟಿ ರೂ.ಗಳನ್ನು ಮೀಸಲಿಡಬೇಕೆಂದು ಪ್ರಮುಖರು ಮನವಿ ಮಾಡಿದರು.
ಸರ್ಕಾರದ ಅನುದಾನ ಸಿಗದೆ ಹೋದರೆ ಇಷ್ಟು ವರ್ಷಗಳ ಕಾಲ ನಡೆದುಕೊಂಡು ಬಂದ ಹಾಕಿ ಹಬ್ಬ ನಿಂತು ಹೋಗುವ ಸಾಧ್ಯತೆಗಳಿದ್ದು, ಕ್ರೀಡಾ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಲಿದೆ ಎಂದು ಗಮನ ಸೆಳೆದರು.
ರಾಜ್ಯ ಮತ್ತು ರಾಷ್ಟ್ರದ ಕ್ರೀಡಾ ಕ್ಷೇತ್ರಕ್ಕೆ ಸಾವಿರಾರು ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿರುವ ಕೊಡಗು ಜಿಲ್ಲೆಯ ಗ್ರಾಮ ಗ್ರಾಮಗಳಲ್ಲಿ ಕ್ರೀಡಾ ಪ್ರತಿಭೆಗಳಿದ್ದಾರೆ. ಜಿಲ್ಲೆಯ ಪ್ರತಿಯೊಬ್ಬರಲ್ಲೂ ಕ್ರೀಡಾ ಉತ್ಸಾಹವಿದೆ, ಆದರೆ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಸ್ಫೂರ್ತಿ ತುಂಬಬಹುದಾದ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯವೊಂದನ್ನು ಸ್ಥಾಪಿಸಬೇಕೆಂದು ನಿಯೋಗದ ಸದಸ್ಯರು ಕೋರಿದರು.
ಈ ಹಿಂದೆ ನಡೆದ ಕುಲ್ಲೇಟಿರ ಹಾಕಿ ಹಬ್ಬಕ್ಕೆ ಸಂಧಿಸಿದಂತೆ 40 ಲಕ್ಷ ರೂ. ಸರ್ಕಾರದಿಂದ ಬರಲು ಬಾಕಿ ಇದ್ದು ಇದನ್ನೂ ಬಿಡುಗಡೆ ಮಾಡಿಕೊಡಬೇಕೆಂದು ಮನವಿ ಮಾಡಿದರು.
ನಂತರ ಮಾತನಾಡಿದ ತೇಲಪಂಡ ಶಿವಕುಮಾರ್ ನಾಣಯ್ಯ ಅವರು ಕ್ರೀಡಾ ಸಚಿವರು ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದು, ವಿಶಿಷ್ಟವಾದ ಕೊಡವ ಕೌಟುಂಬಿಕ ಹಾಕಿ ಹಬ್ಬವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಭರವಸೆಯನ್ನು ನೀಡಿದ್ದಾರೆ ಎಂದರು.
ಶಾಸಕ ಕೆ.ಜಿ.ಬೋಪಯ್ಯ ಅವರು ಕೂಡ ಮುಖ್ಯಮಂತ್ರಿಗಳಿಗೆ ಹಾಗೂ ಕ್ರೀಡಾ ಸಚಿವರಿಗೆ ಈ ಬೇಡಿಕೆಗಳ ಬಗ್ಗೆ ಪತ್ರ ಬರೆದು ಶಿಫಾರಸ್ಸು ಮಾಡಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ.ನಾಣಯ್ಯ, ನಾಪೋಕ್ಲು ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಮುಕ್ಕಾಟಿರ ಪೂಣಚ್ಚ, ಪ್ರಮುಖರಾದ ತೇಲಪಂಡ ಪ್ರವೀಣ್ ಮತ್ತಿತರರು ನಿಯೋಗದಲ್ಲಿದ್ದರು.