ಹೊಸದಿಗಂತ ವರದಿ, ಕಲಬುರಗಿ:
ಜೆಸ್ಕಾಂ ವ್ಯಾಪ್ತಿಯ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿನ ಕಬ್ಬು, ಭತ್ತ, ತೊಗರಿ ಮತ್ತು ಇತರೆ ಬೆಳೆಗಳಿಗೆ ಕೃಷಿ ನೀರಾವರಿ ಪಂಪ್ ಸೆಟ್‍ಗಳಿಗೆ ಈಗಾಗಲೇ ಅಕ್ಟೋಬರ್ 19 ರಿಂದ ಹಗಲು ವೇಳೆಯಲ್ಲಿಯೇ ಪ್ರತಿದಿನ 5 ರಿಂದ 6 ಗಂಟೆಗಳ ಕಾಲ 3-ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣವರ್ ತಿಳಿಸಿದ್ದಾರೆ.
ಬುಧವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು,ರೈತರು ತಮ್ಮ ಕಬ್ಬು ಹಾಗೂ ಇತರೆ ಬೆಳೆಗಳಿಗೆ ಹೆಚ್ಚಿನ ಸಮಯದ ವಿದ್ಯುತ್ ಪೂರೈಸಬೇಕೆಂದು ಕೋರಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಸಕ್ತ ಮುಂಗಾರು ವೈಫಲ್ಯದ ನಡುವೆಯೂ ರಾಜ್ಯ ಸರ್ಕಾರವು ವಿದ್ಯುತ್ ಕೊರತೆಯನ್ನು ಸರಿದೂಗಿಸಲು ಬೇರೆ ಮೂಲಗಳಿಂದ ವಿದ್ಯುತ್ ಖರೀದಿಸಿ ರೈತರಿಗೆ ವಿದ್ಯುತ್ ಪೂರೈಕೆಗೆ ಸರ್ಕಾರ ಆದೇಶಿಸಿರುತ್ತದೆ.
ಅದರಂತೆ ನಿಗಮದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಪ್ರತಿದಿನ 5 ರಿಂದ 6 ಗಂಟೆಗಳ ಕಾಲ 3-ಫೇಸ್ ವಿದ್ಯುತ್ ಪೂರೈಸುವಂತೆ ಜೆಸ್ಕಾಂ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.