ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಇನ್ನೂ 5 ದಿನ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರು ನಗರದಲ್ಲಿ 2 ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ರಾಜ್ಯ ರಾಜಧಾನಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆ (Rains) ಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಧಾರಾಕಾರ ಮಳೆಯಿಂದ ಹಲವೆಡೆ ಬೃಹತ್ ಗಾತ್ರದ ಮರಗಳು, ವಿದ್ಯುತ್ ಕಂಬಗಳು, ಮನೆ ಮೇಲ್ಚಾವಣಿಗಳು ಕುಸಿದು ಬಿದ್ದಿವೆ. ಕೆಲ ಸಾವು ನೋವುಗಳು ಸಹ ಸಂಭವಿಸಿರುವುದು ವರದಿ ಆಗಿದೆ.
ಇದೀಗ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ 2 ದಿನ ಮಳೆ ಸಾಧ್ಯತೆಯಿದ್ದು, ದಕ್ಷಿಣ ಒಳನಾಡಿನ 17 ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಉತ್ತರ ಒಳನಾಡು, ಕರಾವಳಿ ಭಾಗದಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ.
ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ರಾಮನಗರ, ಮಂಡ್ಯ, ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿ ಹಾಗೂ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ ಗಾಳಿಯ ವೇಗ ಕೂಡ ಹೆಚ್ಚಾಗಿರಲಿದ್ದು, ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.