Thursday, August 11, 2022

Latest Posts

ಖಾಸಗಿ ಆಸ್ಪತ್ರೆಗಳಿಗೆ ಶೇ.50 ಹಾಸಿಗೆ ಸರ್ಕಾರದಿಂದಲೇ ಹಂಚಿಕೆ : ಸಚಿವ ಬಿ.ಶ್ರೀರಾಮುಲು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..

ಹೊಸ ದಿಗಂತ ವರದಿ, ಚಿತ್ರದುರ್ಗ:

ಕೋವಿಡ್ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿನ ಹಾಸಿಗೆ ಸಾಮರ್ಥ್ಯದಲ್ಲಿ ಶೇ.50ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಾಗಿದ್ದು ಈ ಸೀಟುಗಳಿಗೆ ಸರ್ಕಾರದಿಂದಲೇ ಕೋವಿಡ್ ಚಿಕಿತ್ಸೆಗೆ ಹಂಚಿಕೆ ಮಾಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕೋವಿಡ್ ನಿರ್ವಹಣಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಎಂಎ ಕಾಯ್ದೆಯನ್ವಯ ವಿಪತ್ತಿನ ಸಂದರ್ಭದಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳು ಹಾಸಿಗೆ ಸಾಮರ್ಥ್ಯದ ಶೇ.50 ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಾಗಿದ್ದು, ಇದಕ್ಕೆ ಸರ್ಕಾರ ನಿರ್ಧಿಷ್ಟ ದರ ನೀಡಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೆಪಿಎಂಎ ಕಾಯ್ದೆಯನ್ವಯ ನೊಂದಣಿಯಾದ 33 ಖಾಸಗಿ ಆಸ್ಪತ್ರೆಗಳಿದ್ದು ಇದರಲ್ಲಿ 1317 ಹಾಸಿಗೆ ಇರುತ್ತವೆ. ಒಟ್ಟು ಸೀಟುಗಳಲ್ಲಿ ಶೇ. 50 ರಷ್ಟು ಹಾಸಿಗೆಯನ್ನು ಕೋವಿಡ್‌ಗೆ ಮೀಸಲಿರಿಸಬೇಕು, ಇದರಿಂದ 658 ಹಾಸಿಗೆಗಳು ಲಭ್ಯವಾಗಲಿವೆ. ಈಗಾಗಲೇ 5ಆಸ್ಪತ್ರೆಗಳನ್ನು ಮಾತ್ರ ಗುರುತಿಸಿದ್ದು ಇನ್ನುಳಿದ ಆಸ್ಪತ್ರೆಗಳನ್ನು ಸಹ ಗುರುತಿಸಲಾಗುತ್ತದೆ ಎಂದು ತಿಳಿಸಿದರು.
ಬಸವೇಶ್ವರ ಆಸ್ಪತ್ರೆ, ಬಸಪ್ಪ ಆಸ್ಪತ್ರೆ, ಅಕ್ಷಯ ಗ್ಲೋಬಲ್, ಮಲ್ಟಿಸ್ಪೇಷಾಲಿಟಿ, ವಾಯುಪುತ್ರ ಆಸ್ಪತ್ರೆಗಳಲ್ಲಿ ಶೇ.50 ರಷ್ಟು 166 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಮತ್ತು ಸಿಟಿ ಸ್ಕ್ಯಾನ್‌ಗೆ 1500 ರೂ.ಗಳು ಮತ್ತು ಎಕ್ಸ್‌ರೇಗೆ ರೂ.250 ನಿಗದಿ ಮಾಡಲಾಗಿದೆ. ಇದಕ್ಕಿಂತ ಹೆಚ್ಚು ದರ ಪಡೆದಲ್ಲಿ ಅಂತಹ ಡಯೋಗ್ನಾಸ್ಟಿಕ್ ಸೆಂಟರ್, ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಜಿಲ್ಲೆಗೆ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಪ್ರತಿ ನಿತ್ಯ ಖಾಸಗಿ ಆಸ್ಪತ್ರೆಗಳಿಗೆ 300 ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ 800 ಸೇರಿ 1100 ರೆಮ್‌ಡಿಸಿವರ್ ಇಂಜೆಕ್ಷನ್ ಬೇಕಾಗಿದೆ. ಆದರೆ ಇದಕ್ಕಿಂತಲೂ ಕಡಿಮೆ ಪೂರೈಕೆಯಾಗುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದೆ. ಪೂರೈಕೆಗೆ ಕ್ರಮ ವಹಿಸಲಾಗುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಜಿಲ್ಲಾ ಆಸ್ಪತ್ರೆಯಲ್ಲಿ ಈಗಿರುವ 175 ಬೆಡ್‌ಗಳ ಜೊತೆಗೆ 200 ಹೆಚ್ಚುವರಿ ಬೆಡ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಪ್ರತಿನಿತ್ಯ 6 ಸಾವಿರ ಲೀಟರ್ ಆಕ್ಸಿಜನ್ ಬೇಕಾಗುತ್ತದೆ. ಸಾರ್ವಜನಿಕ ಆಸ್ಪತ್ರೆ, ಡೆಡಿಕೇಟೆಡ್ ಕೋವಿಡ್ ಕೇರ್ ಸೆಂಟರ್‌ಗಳು ಸೇರಿದಂತೆ ಒಟ್ಟು 16,158 ಲೀಟರ್ ಆಕ್ಸಿಜನ್ ಬೇಕಾಗಿದ್ದು, ಸುಮಾರು 15,000 ಲೀಟರ್‌ನಷ್ಟು ಪೂರೈಕೆಯಾಗುತ್ತಿದೆ. ಕೊರತೆಯಾಗುವ ಆಕ್ಸಿಜನ್ ಪೂರೈಕೆಗೆ ಕ್ರಮ ವಹಿಸಲಾಗುವುದು.
ಎಸ್‌ಡಿಆರ್‌ಎಫ್‌ನಡಿ ಜಿಲ್ಲೆಗೆ 20 ಕೋಟಿ ಮಂಜೂರಾಗಿದ್ದು ಇದರಲ್ಲಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಲಾವುದು. ಪ್ರತಿ ತಾಲ್ಲೂಕಿನಲ್ಲಿಯು ಉತ್ಪಾದನಾ ಘಟಕ ಸ್ಥಾಪನೆ ಸೇರಿದಂತೆ ಜಿಲ್ಲೆಯಲ್ಲಿನ ಸ್ಟೀಲ್ ಇಂಡಸ್ಟ್ರೀಸ್‌ಗಳಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲು ಉತ್ತೇಜಿಸಲಾಗುತ್ತದೆ ಎಂದರು.
ಪಿಎಂ ಕೇರ್ ನಿಧಿಯಡಿ ಜಿಲ್ಲೆಗೆ 60 ವೆಂಟಿಲೇಟರ್‌ಗಳನ್ನು ನೀಡಿದ್ದು, ತಾಲ್ಲೂಕು ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗಿತ್ತು. ಅಲ್ಲಿ ಸಮರ್ಪಕವಾಗಿ ಬಳಕೆ ಮಾಡಲು ತಾಂತ್ರಿಕ ಪರಿಣಿತರ ಕೊರತೆಯಿಂದ ಅವುಗಳನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿ ಈಗಿರುವ 30 ವೆಂಟಿಲೇಟರ್‌ಗಳ ಬದಲಾಗಿ 60 ಕ್ಕೆ ಹೆಚ್ಚಳ ಮಾಡಲಾಗುತ್ತದೆ. ಇದರಿಂದ ತೀವ್ರ ನಿಗಾ ಘಟಕದ ಚಿಕಿತ್ಸೆ ಅಗತ್ಯವಿರುವವರಿಗೆ ಸಹಾಯವಾಗಲಿದೆ ಎಂದು ಹೇಳಿದರು.
ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿ.ಪಂ. ಸಿಇಒ ಡಾ.ಕೆ.ನಂದಿನಿದೇವಿ, ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಡಿಎಚ್‌ಒ ಡಾ.ಪಾಲಾಕ್ಷ, ಜಿಲ್ಲಾ ಸರ್ಜನ್ ಡಾ.ಬಸವರಾಜಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಂಗನಾಥ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss