ಮುಂಗಾರು ಪೂರ್ವ ಮಳೆಯಿಂದ 52 ಜನರ ಸಾವು, 814 ಮನೆಗಳಿಗೆ ಹಾನಿ: ಸಿಎಂ ಸಿದ್ದರಾಮಯ್ಯ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಂಗಾರು ಪೂರ್ವ ಮಳೆಯ ಹೈಹಾನಿಯ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

. ಏಪ್ರಿಲ್, ಮೇ ತಿಂಗಳಿನಿಂದ ಮುಂಗಾರು ಪೂರ್ವ ಮಳೆಯಾಗುತ್ತಿದೆ (Pre-monsoon rains in Karnataka). ಈ ಬಾರಿ ವಾಡಿಕೆಗಿಂತ ಶೇಕಡಾ 10ರಷ್ಟು ಹೆಚ್ಚು ಮಳೆಯಾಗಿದೆ ಎಂದು ಹೇಳಿ ಜೀವ ಹಾನಿ ಆಸ್ತಿ ಪಾಸ್ತಿ ನಷ್ಟದ ಬಗ್ಗೆ ಮಾಹಿತಿ ನೀಡಿದರು.

ಸಂಕಷ್ಟಕ್ಕೆ ತುತ್ತಾದವರಿಗೆ ಕೂಡಲೇ ಪರಿಹಾರ ನೀಡಲು ಸೂಚನೆ ನೀಡಲಾಗಿದೆ ಎಂದು ಹೇಳಿದ ಸಿದ್ದರಾಮಯ್ಯ, ಮುಂಗಾರು ಪೂರ್ವ ಮಳೆಯಿಂದ 52 ಜನರು ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. 332 ಜಾನುವಾರು ಮೃತಪಟ್ಟಿವೆ, 814 ಮನೆಗಳಿಗೆ ಹಾನಿಯಾಗಿದೆ. ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡುವಂತೆ ಸೂಚನೆ ನೀಡಲಾಗಿದೆ. ಮನೆ ಹಾನಿ ಬಗ್ಗೆ ಪರಿಶೀಲಿಸಿ ಪರಿಹಾರ ನೀಡುವಂತೆ ಸೂಚಿಸಲಾಗಿದೆ ಎಂದರು.

ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಒಟ್ಟು 540 ಕೋಟಿ ಹಣವಿದೆ. ಅಗತ್ಯವಿದ್ದರೆ ವಿಪತ್ತು ನಿಧಿಯಡಿ ಪರಿಹಾರ ನೀಡುವುದಾಗಿ ಹೇಳಿದ್ದೇವೆ. ತೊಗರಿ ಬೆಳೆಗೆ ಬಂದಿದ್ದ ನೆಟ್ಟೆ ರೋಗಕ್ಕೆ ಪರಿಹಾರ ನೀಡಲು ಸೂಚನೆ ನೀಡಲಾಗಿದೆ. ಮುಂಗಾರು ಬಿತ್ತನೆಗೆ ಯಾವುದೇ ಅಡ್ಡಿಯಾಗದಂತೆ ಸಿದ್ಧರಾಗಿರಿ. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಶೇಖರಣೆಗೆ ಸೂಚಿಸಿದ್ದೇವೆ. ರಾಜ್ಯದಲ್ಲಿ 13.52 ಲಕ್ಷ ಮೆಟ್ರಿಕ್ ಟನ್​ ರಸಗೊಬ್ಬರ ದಾಸ್ತಾನಿದೆ. ರೈತರಿಗೆ ಸಮಸ್ಯೆಯಾದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾಗಿ ತಿಳಿಸಿದರು.

ಈಗಾಗಲೇ ನೆರೆ ಬಂದು ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಮತ್ತೆ ಸಮಸ್ಯೆ ಮರುಕಳಿಸದಂತೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಅಲ್ಲದೆ, ಹಳ್ಳಿಗಳಿಗೆ ತೆರಳುವಂತೆ ಡಿಸಿ, ಸಿಇಒಗಳಿಗೆ ಸೂಚನೆ ನೀಡಿದ್ದೇವೆ. ಕಚೇರಿಯಿಂದ ಕಾರ್ಯ ನಿರ್ವಹಿಸಿದರೆ ವಸ್ತುಸ್ಥಿತಿ ಅರ್ಥವಾಗಲ್ಲ. ನೀವೇ ಖುದ್ದಾಗಿ ಭೇಟಿ ನೀಡಿದರೆ ಮನವರಿಕೆ ಆಗಲಿದೆ ಎಂದಿರುವುದಾಗಿ ತಿಳಿಸಿದರು.

ಬೆಂಗಳೂರಿನಲ್ಲಿ ಮಳೆ ಬಂದಾಗ ಅಂಡರ್​ಪಾಸ್​ ಬಂದ್
ಮಳೆಯಿಂದ ಅವಾಂತರ ಸೃಷ್ಟಿಯಾಗುತ್ತಿರುವ ಹಿನ್ನೆಲೆ ಬೆಂಗಳೂರು ನಗರದಲ್ಲಿ ಅತಿಕ್ರಮ ತೆರವು ಕಾರ್ಯಾಚರಣೆ ಮುಂದುವರಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ನಮ್ಮ ಅವಧಿಯಲ್ಲಿ ಎಲ್ಲಿಗೆ ನಿಂತಿತ್ತು ಅಲ್ಲಿಂದ ಮುಂದುವರಿಸ್ತೇವೆ. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ಮಳೆಯಾದಾಗ ಅಂಡರ್​ಪಾಸ್​ ಬಂದ್ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಅಂಡರ್ ಪಾಸ್​ನಲ್ಲಿ ನೀರು ನಿಂತಿದ್ದರೆ ಅಂಡರ್ ಪಾಸ್ ಕ್ಲೋಸ್ ಮಾಡಬೇಕು. ಅಂತಹ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕೊಡಬಾರದು. ವೈಜ್ಞಾನಿಕವಾಗಿ ಅಂಡರ್ ಪಾಸ್ ಸರಿ ಮಾಡಲು ಸೂಚನೆ ನೀಡಲಾಗಿದೆ. ಡ್ರೈನೇಜ್​ಗಳನ್ನ ಕೂಡಲೇ ಕ್ಲೀನ್ ಮಾಡಬೇಕು, ರಾಜಕಾಲುವೆ ಒತ್ತುವರಿಯನ್ನ ಮತ್ತೆ ಪ್ರಾರಂಭ ಮಾಡಬೇಕು ಅಂತಾ ಸೂಚನೆ ನೀಡಿದ್ದಾಗಿ ತಿಳಿಸಿದರು.

ಜನಸ್ನೇಹಿ ಆಡಳಿತ ನೀಡುವಂತೆ ಪೊಲೀಸರಿಗೆ ಸಿಎಂ ಸೂಚನೆ
ದೂರು ನೀಡಲು ಬರುವವರ ಜತೆ ಸ್ನೇಹದಿಂದ ವರ್ತಿಸಬೇಕು, ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆದರೆ ಸಂಬಂಧಪಟ್ಟ ಡಿಸಿಪಿ, ಎಸ್​ಪಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಕಾನೂನು ಕ್ರಮಕೈಗೊಳ್ಳುವಾಗ ಆ ಧರ್ಮ ಈ ಧರ್ಮ ಎನ್ನಬಾರದು.ಜನಸ್ನೇಹಿ ಆಡಳಿತ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು. ಸರ್ವರನ್ನು ಸಮಾನರಾಗಿ ಕಾಣುವಂತೆ ಪೊಲೀಸರಿಗೆ ಸೂಚಿಸಿದ್ದೇವೆ. ರಾಜ್ಯದಲ್ಲಿ ಇನ್ನು ಮುಂದಕ್ಕೆ ನೈತಿಕ ಪೊಲೀಸ್​ಗಿರಿಗೆ ಅವಕಾಶವಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!