57 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಬೆಳೆಸಲು ಚಿಂತನೆ: ಸಚಿವ ಉಮೇಶ್ ಕತ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್ , ಬೆಳ್ತಂಗಡಿ:

ದೇಶದಲ್ಲಿ ಇತರ ರಾಜ್ಯಗಳಿಗಿಂತ ಕರ್ನಾಟಕ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯವಾಗಿದೆ. ರಾಜ್ಯದಲ್ಲಿ 6.60 ಲಕ್ಷ ಹೆಕ್ಟೇರ್ ಪ್ರದೇಶವನ್ನು ಡಿ ನೊಟಿಫಕೇಶನ್ ಮಾಡಿ ಕಂದಾಯ ಇಲಾಖೆಗೆ ನೀಡಿದ್ದು, ಅರಣ್ಯ ಇಲಾಖೆ 3.30 ಲಕ್ಷ ಹೆಕ್ಟೇರ್‌ನಲ್ಲಿ ಗಿಡ-ಮರಗಳನ್ನು ಬೆಳೆಸಲು ಯೋಜನೆ ರೂಪಿಸಲಾಗಿದೆ. ಬೆಳಗಾವಿ, ಬಾಗಲಕೋಟೆ ಮತ್ತು ಬಿಜಾಪುರದಲ್ಲಿ 57 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಬೆಳೆಸಲು ಉದ್ದೇಶಿಸಲಾಗಿದೆ ಎಂದು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದರು.

ಅವರು ಗುರುವಾರ ಬೆಳ್ತಂಗಡಿ ತಾಲೂಕಿನ ಬಡಕೋಡಿ ಗ್ರಾಮದ ಎರ್ಮೋಡಿ ಅರಣ್ಯ ಪ್ರದೇಶದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ, ಕರ್ನಾಟಕ ಅರಣ್ಯಇಲಾಖೆ, ಕುಂದಾಪುರ ಪ್ರಾದೇಶಿತ ಅರಣ್ಯ ವಿಭಾಗ ವೇಣೂರು ವಲಯ ಇದರ ಆಶ್ರಯದಲ್ಲಿ ರಾಜ್ಯಾದ್ಯಂತ ಸಾಮಾಜಿಕ ಅರಣ್ಯೀಕರಣ ಅಂಗವಾಗಿ ದಶಲಕ್ಷ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬೆಳಗಾವಿ, ಬಾಗಲಕೋಟೆ ಮತ್ತು ಬಿಜಾಪುರದಲ್ಲಿ 57,000 ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಬೆಳೆಸಲು ಉದ್ದೇಶಿಸಲಾಗಿದೆ. ಕಳೆದ ವರ್ಷ ಕಾಡುಪ್ರಾಣಿಗಳ ಕಾಟದಿಂದ ರೈತರಿಗಾದ ನಷ್ಟಕ್ಕೆ ಸರ್ಕಾರದಿಂದ 20 ಕೋಟಿ ರೂ. ನೆರವು ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಮಾನವರು ಮತ್ತು ಪ್ರಾಣಿಗಳ ಮಧ್ಯೆ ಸಂಘರ್ಷ ತಡೆಯಲು ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ಆರಂಭಿಸಿದ ಯೋಜನೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಕುರಿತು ಅರಣ್ಯ ಇಲಾಖೆ ಪೂರ್ಣ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು, ಬದುಕು ಮತ್ತು ಬದುಕಲು ಬಿಡು ಎಂಬುದು ಜೈನಧರ್ಮದ ಶ್ರೇಷ್ಠ ತತ್ವವಾಗಿದೆ. ನಾವೂ ಬದುಕಿ, ಇತರರೂ ಸುಖ-ಶಾಂತಿ, ನೆಮ್ಮದಿಯಿಂದ ಬದುಕಲು ಬಿಡಬೇಕು  ಎಂದು ಹೇಳಿದರು.
ದೇವರಕಾಡು ಸಸಿ ವಿತರಣೆಯನ್ನು ಶಾಸಕ ಹರೀಶ್ ಪೂಂಜ ಹಾಗೂ ಶೌರ್ಯವನ ಸಸಿ ವಿತರಣೆಯನ್ನು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ವಿತರಿಸಿ ಶುಭಾಶಂಸನೆ ಮಾಡಿದರು.
ಕೆರೆಯಂಗಳ ಸಸಿ ವಿತರಣೆಯನ್ನು ಸಚಿವ ಉಮೇಶ್ ಕತ್ತಿ, ಹಣ್ಣುಪಂಪಲು ಸಸಿ ವಿತರಣೆಯನ್ನು ಹೊಸಂಗಡಿ ಗ್ರಾ.ಪಂ. ಸದಸ್ಯ ಕರುಣಾಕರ ಪೂಜರಿ ಹಾಗೂ ಶಾಲಾವನ ಸಸಿ ವಿತರಣೆಯನ್ನು ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್ ನೆಟಲ್‌ಕರ್ ನೆರವೇರಿಸಿದರು.

ಶೀಲಾ ಉಮೇಶ್ ಕತ್ತಿ, ಕುಂದಾಪುರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶೀಶ್ ರೆಡ್ಡಿ, ಮಂಗಳೂರು ವಿಭಾಗ ಡಿಎಫ್‌ಒ ದಿನೇಶ್ ಕುಮಾರ್, ಮೂಡುಬಿದ್ರೆ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್, ಪಡ್ಯಾರಬೆಟ್ಟು ಕ್ಷೇತ್ರದ ಧರ್ಮದರ್ಶಿ ಜೀವಂಧರ್ ಕುಮಾರ್, ಗ್ರಾ.ಯೋಜನೆ ಟ್ರಸ್ಟಿ ಸಂಪತ್ ಸಾಮ್ರಾಜ್ಯ, ಯೋಜನೆ ಸಿಇಒ ಅನಿಲ್ ಕುಮಾರ್, ಪ್ರಾದೇಶಿಕ ನಿರ್ದೇಶಕ ಶಾಂತರಾಮ ಪೈ, ವೇಣೂರು ವಲಯ ಅರಣ್ಯಾಧಿಕಾರಿ ಮಹೀಮ್ ಜನ್ನು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!