Thursday, August 11, 2022

Latest Posts

6 ವರ್ಷದೊಳಗಿನ ಮಕ್ಕಳಿಗಿಲ್ಲ ಆನ್ ಲೈನ್ ಸ್ಕೂಲ್: ಕೇಂದ್ರದ ಮಾರ್ಗಸೂಚಿ ಬಿಡುಗಡೆ ಬಳಿಕ ಶೈಕ್ಷಣಿಕ ವರ್ಷಾರಂಭ: ಸಚಿವ ಸುರೇಶ್ ಕುಮಾರ್

ಮೈಸೂರು: ರಾಜ್ಯದಲ್ಲಿ ಶಾಲೆಗಳನ್ನು ಪ್ರಾರಂಭಿಸುವ ಕುರಿತು ಕೇಂದ್ರ ಸರ್ಕಾರದ ಮಾರ್ಗಸೂಚಿ ಬಿಡುಗಡೆಗಾಗಿ ಕಾಯುತ್ತಿದ್ದೇವೆ, 6 ವರ್ಷದೊಳಗಿನ ಮಕ್ಕಳಿಗೆ ಆನ್ ಲೈನ್ ತರಗತಿ ನಡೆಸಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೈಕ್ಷಣಿಕ ವರ್ಷ ಯಾವಾಗ ಆರಂಭಿಸಬೇಕು, ಯಾವ ರೀತಿ ಶಾಲೆಗಳ ತರಗತಿಗಳನ್ನು ಯಾವಾಗ ಪ್ರಾರಂಭಿಸಬೇಕು, ವ್ಯಕ್ತಿಗತ ಅಂತರ ಕಾಪಾಡುವ ನಿಟ್ಟಿನಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಬಿಡುಗಡೆಯಾದ ಬಳಿಕ, ಅದನ್ನು ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

6 ವರ್ಷದೊಳಗಿನ ಮಕ್ಕಳಿಗೆ ಆನ್ ಲೈನ್ ತರಗತಿ ನಡೆಸಲು ಸಾಧ್ಯವಿಲ್ಲ. ಆನ್ ಲೈನ್ ತರಗತಿ ನಡೆಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಶೇ 80ರಷ್ಟು ಪೋಷಕರು ತಮ್ಮ ಮಕ್ಕಳನ್ನು LKG, UKG ಶಾಲೆಗೆ ಕಳುಹಿಸಲು ಸಿದ್ಧರಿಲ್ಲ, ಕೊರೋನಾ ಸೋಂಕು ಹಿನ್ನಲೆಯಲ್ಲಿ ಇನ್ನೂ ಎರಡು ತಿಂಗಳ ಅವಕಾಶ ನೀಡುವಂತೆ ಕೇಳುತ್ತಿದ್ದಾರೆ. ಆದರೆ UKG ಮಕ್ಕಳಿಗೆ ಆನ್ ಲೈನ್ ತರಬೇತಿ ನೀಡಲು ಕೆಲವೊಂದು ಶಿಕ್ಷಣ ಸಂಸ್ಥೆಗಳು ಮುಂದಾಗಿವೆ. ಈ ಸಾಧ್ಯತೆಯ ಬಗ್ಗೆ ನಿಮ್ಹಾನ್ಸ್ ಮಾನಸಿಕ ತಜ್ಞರನ್ನು ಕೇಳಿದಾಗ, 6 ವರ್ಷದೊಳಗಿನ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನೀಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ಇದನ್ನು ಮನದಲ್ಲಿಟ್ಟುಕೊಂಡು, ಕೇಂದ್ರದ ಮಾರ್ಗಸೂಚಿ ಬಂದ ಬಳಿಕ ಶಾಲೆಯ ತರಗತಿ ಆರಂಭಿಸುವ ಬಗ್ಗೆ ತೀರ್ಮಾನಿಸುತ್ತೇವೆ ಎಂದು ತಿಳಿಸಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss