ಭರ್ಜರಿಯಿಂದ ನಡೆದ ಜಾನುವಾರು ಜಾತ್ರೆ – ವಿವಿಧ ತಳಿಗಳ 6 ಸಾವಿರ ದನಗಳು ಭಾಗಿ

ಹೊಸದಿಗಂತ ವರದಿ ಸಾವಳಗಿ:

ಜಾನುವಾರುಗಳ ಮಾರಾಟ ಹಾಗೂ ಖರೀದಿಯಂತಹ ಬಹುದೊಡ್ಡ ಮಾರುಕಟ್ಟೆ ಇತ್ತೀಚಿಗೆ ಸಾಕಷ್ಟು ಪ್ರಮಾಣದಲ್ಲಿ ಕುಸಿಯುತ್ತಿದೆ ಎನ್ನುವ ಮಾತಿಗೆ ಅಪವಾದವೆನ್ನುವಂತೆ ಗೋಕಾಕ ತಾಲೂಕಿನ ಸಾವಳಗಿಯ ಶಿವಲಿಂಗೇಶ್ವರ ಜಾತ್ರೆಯಲ್ಲಿ ನೆರೆದ ಸಾವಿರಾರು ದನಗಳ ಹಿಂಡು ನೆರೆದಿತ್ತು.

ದೊಡ್ಡ ಬಯಲಿನಲ್ಲಿ ಸಾವಿರಾರು ದನಗಳು, ಅವುಗಳೊಂದಿಗೆ ಮಾಲಿಕರು, ಅವರ ಪರಿವಾರ ಹೀಗೆ ಸಾಕಷ್ಟು ಸಂಖ್ಯೆಯಲ್ಲಿ ಬೇರೆ ಬೇರೆ ಊರುಗಳಿಂದ ದನಗಳ ಜಾತ್ರೆಗೆ ಆಗಮಿಸಿದ ರೈತರಿಗೆ ಗೋಕಾಕ ತಾಲೂಕಿನ ಸಾವಳಗಿ ಶಿವಲಿಂಗೇಶ್ವರ ಜಾತ್ರೆಯಲ್ಲಿ ನಡೆದ ದನಗಳ ಜಾತ್ರೆ ಬಹುದೊಡ್ಡ ಮಾರುಕಟ್ಟೆ ಒದಗಿಸಿಕೊಟ್ಟಿತು.

ಸಾವಿರಾರು ಸಂಖ್ಯೆಯಲ್ಲಿ ಬಂದ ನೂರಾರು ತರಹದ ತಳಿಗಳ ದನಗಳನ್ನು ಅವುಗಳ ವಿಶೇಷತೆಗಳೊಂದಿಗೆ ಮಾರಾಟ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು. ಜಾತ್ರೆಗೆ ಆಗಮಿಸಿದ್ದ ದನಗಳಿಗೆ ಹುಲ್ಲು, ಹಿಂಡಿ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಜಾತ್ರೆಗೆಂದೇ ಬಂದ ರೈತ ಕುಟುಂಬದವರಿಗೂ ಸಹ ಲೈಟು, ನೀರು, ಊಟ, ಶೌಚಾಲಯ, ಸ್ನಾನಗೃಹಗಳ ವ್ಯವಸ್ಥೆ ಜಾತ್ರಾ ಸಮೀತಿಯಿಂದ ಮಾಡಲಾಗಿತ್ತು.

ಜಾತ್ರೆಯಲ್ಲಿ ಒಟ್ಟು 6360 ಜೊತೆ ಜಾನುವಾರಗಳು ಭಾಗವಹಿಸಿದ್ದವು, ಅವುಗಳಲ್ಲಿ 739 ಜಾನುವಾರುಗಳು ಖರೀದಿಯಾದವು. ಅದರಲ್ಲಿ 1,51,000 ರೂ.ಗಳ ಅತ್ಯಂತ ಹೆಚ್ಚಿನ ಮೊತ್ತದಲ್ಲಿ ದನಗಳ ಜೋಡನ್ನು ಮಾರಿದರೆ, ಇತ್ತೀಚಿಗೆ ಮಾಯವಾಗುತ್ತಿರುವ ಕೆಲವೊಂದು ಅಪರೂಪದ ತಳಿಗಳೂ ಸಹ ಮಾರಾಟವಾದವು.

ಜಾನುವಾರುಗಳಿಗೆ ಕಟ್ಟಲು ಬೇಕಾದ ಕಂಡೆ, ಸರಪಳಿ, ಹಗ್ಗಗಳು, ವಿವಿಧ ರೀತಿಯ ಅಲಂಕಾರಿಕ ಸಾಮಗ್ರಿಗಳು, ಕೋಡುಗಳಿಗೆ, ಕಾಲುಗಳಿಗೆ ಕಟ್ಟುವಂತಹ ಗೆಜ್ಜೆಗಳು ಹೀಗೆ ದನಗಳ ಜಾತ್ರೆಗೆ ಸಂಬಂಧಿಸಿದ ಎಲ್ಲ ವಸ್ತುಗಳಿಗೂ ಸಹ ಜೋರಾದ ವ್ಯಾಪಾರ ನಡೆಯಿತು, ಸಾಕಷ್ಟು ಪ್ರಮಾಣದಲ್ಲಿ ವಸ್ತುಗಳು ಖರೀದಿಯಾದವು.

ದೇವಸ್ಥಾನದ ಹಿಂದಿನ ಆವರಣದಲ್ಲಿ ಬಹುದೊಡ್ಡ ಜಾಗದಲ್ಲಿ ಜಾನುವಾರುಗಳಿಗೆ ಬೇಕಾದ ಸೌಲಭ್ಯ ಕಲ್ಪಿಸಲಾಗಿತ್ತು. ಜಾತ್ರೆ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!