Friday, July 1, 2022

Latest Posts

ಮೊಮ್ಮಕ್ಕಳೊಟ್ಟಿಗೆ ಕಾಲ ಕಳೆಯುವ ವಯಸ್ಸಿನಲ್ಲಿ ಸ್ಟೇತಸ್ಕೋಪ್ ಹಿಡಿದು ಹೊರಟ 64ರ ನಿವೃತ್ತ ಬ್ಯಾಂಕ್ ಉದ್ಯೋಗಿ!

  • ಕಾವ್ಯಾ ಜಕ್ಕೊಳ್ಳಿ

ಗಾಂಧೀಜಿ ತಮ್ಮ 79ನೇ ವಯಸ್ಸಿನಲ್ಲಿ ಬಂಗಾಳಿ ಭಾಷೆ ಕಲಿಯಲು ಪ್ರಯತ್ನಿಸಿದ್ದರು ಗೊತ್ತಾ? ’ರಾಮಾಯಣ’ ವನ್ನು ವಾಲ್ಮೀಕಿ ರಚಿಸಿದ್ದು ಇಳಿವಯಸ್ಸಿನಲ್ಲಿಯೇ. ಇಂಗ್ಲಿಷ್ ಸಾಹಿತ್ಯದ ಪ್ರಮುಖರೆನಿಸಿರುವ ಹೋಮರ್, ಮಿಲ್ಟನ್ ಹಾಗೂ ಡಾಂಟೆ ಮಹಾಕಾವ್ಯಗಳನ್ನು ರಚಿಸಿದ್ದು ವಯಸ್ಸಿನಿಂದಾಗಿ ತಾವು ಪೂರ್ತಿಯಾಗಿ ಕುರುಡರಾದ ಮೇಲೇ!

ಖಂಡಿತ!! ‘ಹೊಸತನ್ನು ಕಲಿಯುವುದಕ್ಕೆ ವಯಸ್ಸು ಅಡ್ಡಿಯಿಲ್ಲ. ವಯಸ್ಸು ಕೇವಲ ಸಂಖ್ಯೆ ಅಷ್ಟೇ, ಕಲಿಕೆ ಜೀವನದ ಕೊನೆ ಪುಟದವರೆಗೂ ನಿರಂತರ’ ಎನ್ನುತ್ತಾರೆ ಎಂಬಿಬಿಎಸ್ ಓದುತ್ತಿರುವ 64 ವರ್ಷದ ‘ಜೇ ಕಿಶೋರ್ ಪ್ರಧಾನ್’.

1956 ರಲ್ಲಿ ಜನಿಸಿರುವ ಒಡಿಶಾದ ಕಿಶೋರ್ ಪ್ರಧಾನ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿ. ಬದುಕಿನ ಮುಸ್ಸಂಜೆಗಳನ್ನು ಮೊಮ್ಮಕ್ಕಳೊಟ್ಟಿಗೆ ಕಳೆಯುವಂತಹ ವಯಸ್ಸಿನಲ್ಲಿ ವೈದ್ಯರಾಗಲು ಹೊರಟ್ಟಿದ್ದಾರೆ. ಬಾಲ್ಯದಲ್ಲಿ ಕಂಡಿದ್ದ ಡಾಕ್ಟರ್ ಆಗಬೇಕೆಂಬ ಕನಸನ್ನು ಇಳಿವಯಸ್ಸಿನಲ್ಲಿ ನನಸಾಗಿಸುತ್ತಿದ್ದಾರೆ. ಇದೀಗ ಮೊದಲನೇ ವರ್ಷದ ಎಂಬಿಬಿಎಸ್ ಓದುತ್ತಿದ್ದಾರೆ.

ಪ್ರಧಾನ್ ಅವರ ಈ ಸಾಧನೆಯನ್ನು ಭಾರತದ ವೈದ್ಯಕೀಯ ಶಿಕ್ಷಣ ಇತಿಹಾಸದಲ್ಲಿ ನಡೆದ ಅಪರೂಪದ ಘಟನೆಗಳಲ್ಲಿ ಒಂದಾಗಿದೆ.

2019ರಲ್ಲಿ ಸುಪ್ರೀಂ ಕೋರ್ಟ್ ಅಧ್ಯಯನಕ್ಕಿದ್ದ ವಯಸ್ಸಿನ ಮಿತಿಯನ್ನು ತೆಗೆದ ನಂತರ ಕಿಶೋರ್ ತಮ್ಮ ಹೆಜ್ಜೆಯನ್ನು ಮುಂದಕ್ಕೆ ಇಡುತ್ತಾರೆ. ಒಡಿಶಾದ ಪ್ರಮುಖ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಒಂದಾದ ‘ಬುರ್ಲಾದ ವೀರ್ ಸುರೇಂದ್ರ ಸಾಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನಸ್ ಆ್ಯಂಡ್ ರಿಸರ್ಚ್’ (ವಿಮ್ಸಾರ್‌) ನಲ್ಲಿ ನಾಲ್ಕು ವರ್ಷಗಳ ಎಂಬಿಬಿಎಸ್ ಕೋರ್ಸ್ ಗೆ ಸೇರಿಕೊಳ್ಳುತ್ತಾರೆ.

ಡಾಕ್ಟರ್ ಆಗುವ ಕನಸು ಇವತ್ತಿನದಲ್ಲ…

‘ಡಾಕ್ಟರ್ ಆಗಬೇಕೆಂಬ ಕನಸು ಇಂದು ನಿನ್ನೆಯದಲ್ಲ. ಬಾಲ್ಯದಲ್ಲಿಯೇ ನಾನು ವೈದ್ಯನಾಗಬೇಕೆಂದುಕೊಂಡಿದ್ದೆ. 1970ರಲ್ಲಿ ಎಂಬಿಬಿಎಸ್ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದೆ. ಆದರೆ ಉತ್ತೀರ್ಣನಾಗಿರಲಿಲ್ಲ. ವೈದ್ಯನಾಗುವ ಆಸೆಯನ್ನು ಅಲ್ಲಿಗೆ ಬಿಟ್ಟು ದಾರಿ ಬದಲಿಸಿದೆ.

ಆದರೆ, 1982ರಲ್ಲಿ ನನ್ನ ತಂದೆಗೆ ಮೂತ್ರ ಮಾಡುವ ಜಾಗದಲ್ಲಿ ಹುಣ್ಣಾಗಿ ಆಸ್ಪತ್ರೆಗೆ ಸೇರಿಸಲಾಯಿತು. 1987ರಲ್ಲಿ ಅವರನ್ನು ಎರಡು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಯಿತು. ಆದರೂ ಪರಿಣಾಮವಾಗಲಿಲ್ಲ. ಇದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರಿಗೆ ಕರೆದೊಯ್ಯಲಾಯಿತು. ಅಲ್ಲಿನ ಯಶಸ್ವಿ ಚಿಕಿತ್ಸೆಯ ಪರಿಣಾಮ ನನ್ನ ತಂದೆ ಬದುಕುಳಿದರು. ಎಲ್ಲೋ ಅಡಗಿದ್ದ ಡಾಕ್ಟರ್ ಆಗುವ ಕನಸು ಆಗ ಮತ್ತೆ ಮೊಳಕೆಯೊಡೆಯಿತು’ಎನ್ನುತ್ತಾರೆ ಕಿಶೋರ್ ಪ್ರಧಾನ್.

ಬಲವಾಯಿತು ಆಸೆ..

ಔಷಧಗಳ ಬಗ್ಗೆ ಅಧ್ಯಯನ ಮಾಡುವ ಆಸೆ ಬಲವಾಯಿತು. 15 ವರ್ಷದಿಂದ ಕೆಲಸ ಮಾಡುತ್ತಿರುವ ಬ್ಯಾಂಕ್ ಕೆಲಸ ಬಿಟ್ಟು ಎಂಬಿಬಿಎಸ್ ಸೇರುವ ಆಲೋಚನೆ ಮಾಡಿದೆ. ಆದರೆ, ನನ್ನನ್ನೇ ನಂಬಿಕೊಂಡಿರುವ ಕುಟುಂಬದ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ನನ್ನ ಆಸೆ ಪಕ್ಕಕ್ಕಿಟ್ಟೆ ಎನ್ನುತ್ತಾರೆ ಕಿಶೋರ್.

ಹೆಣ್ಣುಮಕ್ಕಳಿಂದ ಪ್ರೇರಣೆ:

ಕಿಶೋರ್ ಅವರಿಗೆ ಅವಳಿ ಹೆಚ್ಚುಮಕ್ಕಳು. ಅವರಿಬ್ಬರು ವೈದ್ಯಕೀಯ ಪ್ರವೇಶ ಪರೀಕ್ಷೆಗಾಗಿ ಓದಿಕೊಳ್ಳುವಾಗ ಕಿಶೋರ್ ಸಹಾಯ ಮಾಡುತ್ತಿದ್ದರು. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರದಲ್ಲಿ ಮಕ್ಕಳಿಗಿಂತ ಹೆಚ್ಚು ಕಿಶೋರ್ ಅವರೇ ತಿಳಿದುಕೊಂಡಿದ್ದರು. ಇದನ್ನು ಗುರುತಿಸಿದ ಮಕ್ಕಳು ಎಂಬಿಬಿಎಸ್ ಓದುವಂತೆ ಪ್ರೇರೇಪಿಸಿದರು.

ಕಿಶೋರ್ ತಡಮಾಡಲಿಲ್ಲ. ಎಂಬಿಬಿಎಸ್ ಓದುವುದನ್ನೇ ಒಂದು ಸವಾಲಾಗಿ ಸ್ವೀಕರಿಸಿ ನೀಟ್ ಪರೀಕ್ಷೆ ಬರೆದು 5,94,380ನೇ Rank ಪಡೆದು, ’ದೈಹಿಕ ಅಂಗವಿಕಲ’ ಕೋಟಾದಲ್ಲಿ ವಿಮ್ಸಾರ್‌ನಲ್ಲಿ 2020ರಲ್ಲಿ ಎಂಬಿಬಿಎಸ್‌ಗೆ ಪ್ರವೇಶ ಪಡೆಯುತ್ತಾರೆ. ಕಿಸೋರ್ ಅವರಿಗೆ 69 ವರ್ಷ ಆಗುವ ಹೊತ್ತಿಗೆ ಎಂಬಿಬಿಎಸ್ ಪೂರ್ಣಗೊಳ್ಳಲಿದೆ.

2020ರಲ್ಲಿ ಕಿಶೋರ್ ಅವರ ಅವಳಿ ಹೆಚ್ಚುಮಕ್ಕಳಲ್ಲಿ ಒಬ್ಬಳು ಮೃತಪಟ್ಟಿದ್ದಾಳೆ. ’ನನ್ನ ಸಾಧನೆಯನ್ನು ಸಂಭ್ರಮಿಸಬೇಕಾದ ಸಮಯದಲ್ಲಿ ಮಗಳಿಲ್ಲದಿರುವುದು ಬಹಳ ನೋವು ತರುತ್ತದೆ. ನನ್ನ ಮಗಳ ನೆನಪಿಗಾಗಿ ನಾನು ಈ ಅಧ್ಯಯನವನ್ನು ಪೂರ್ಣ ಗೊಳಿಸಲೇಬೇಕೆಂಬ ನಿರ್ಧಾರಕ್ಕೆ ಬಂದಿದ್ದೇನೆ’ ಎನ್ನುತ್ತಾರೆ ಕಿಶೋರ್.

‘ಆತ ವಿದ್ಯಾರ್ಥಿಯಲ್ಲ, ನನ್ನ ಸಹಪಾಠಿ’:

‘ಕಿಶೋರ್ ಅವರು ತಾವು ಬದುಕಿರುವವರೆಗೂ ಸಮಾಜದ ಸೇವೆ ಮಾಡಬೇಕೆಂದು ಬಯಸುವವರು. ಕಿಶೋರ್ ನನ್ನ ವಿದ್ಯಾರ್ಥಿಯಲ್ಲ ಸಹಪಾಠಿ ಎಂದು ಭಾವಿಸುತ್ತೇನೆ. ಔಷಧಗಳ ಬಗ್ಗೆ ಅಧ್ಯಯನ ಮಾಡುವುದರಲ್ಲಿ ಅವರಿಗೆ ಬಹಳ ಆಸಕ್ತಿ ಇದೆ. ಅವರು ಅಂದುಕೊಂಡಿರುವ ಗುರಿ ತಲುಪುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ವಿಮ್ಸರ್ ಪ್ರಾಂಶುಪಾಲರು ಹೆಮ್ಮೆಯಿಂದ ಹೇಳುತ್ತಾರೆ.

ಬಾಲ್ಯದಲ್ಲಿ ಕಲಿಯುವುದಕ್ಕೂ ಅದನ್ನೇ ವಯಸ್ಸಾದ ಮೇಲೆ ಕಲಿಯುವುದಕ್ಕೂ ಬಹಳ ವ್ಯತ್ಯಾಸವಿದೆ. ವಯಸ್ಸಾದ ಮೇಲೆ ಕಲಿಯುವಾಗ ಸಾಕಷ್ಟು ದೃಢತೆ ಬೇಕು. ಸೋಲುವ ಮನಸ್ಸನ್ನು ಹಿಡಿದು ನಿಲ್ಲಿಸಬಲ್ಲ ಮತ್ತು ಹೊಸತನಕ್ಕೆ ಹೊಂದಿಕೊಳ್ಳಬಲ್ಲ ಗಟ್ಟಿತನಬೇಕು. ಬಹಳ ಜನ ಕೈ ಚೆಲ್ಲುವುದು ಇದೇ ಹಂತದಲ್ಲಿ. ಅವರು ಹಳೆಯದನ್ನು ಬಿಡಲಾರರು, ಹೊಸದನ್ನು ಕಲಿಯಲಾರರು. ಇಷ್ಟು ವರ್ಷಗಳೇ ಕಳೆದಾಗಿದೆ. ಇನ್ನೇನು ಹೊಸದು ಕಲಿಯುವುದು ಎಂದು ಹುಸಿ ಸಮಾಧಾನ ಹೊದ್ದು ಮಲಗಿಬಿಡುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss