Friday, July 1, 2022

Latest Posts

65ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ: ಕನ್ನಡ ಪ್ರದೇಶಗಳು ಒಗ್ಗೂಡಿದ್ದು ಹೆಮ್ಮೆ-  ಸಚಿವ ಜಗದೀಶ ಶೆಟ್ಟರ್

ಧಾರವಾಡ: ದೇಶದ ಇತಿಹಾಸದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೊರತ ಪ್ರಾಮುಖ್ಯತೆಯಷ್ಟೇ ಕರ್ನಾಟಕ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದೊಂದಿಗೆ, ಕರ್ನಾಟಕ ಏಕೀಕರಣಕ್ಕಾಗಿ ನಡೆದ ಚಳವಳಿಯೂ ಮಹತ್ವ ಪಡೆದಿದೆ ಎಂದು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅಭಿಮಾನ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ-ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ 65ನೇ ಸಾರ್ವಜನಿಕ ಧ್ವಜಾರೋಹಣ ನೇರವೇರಿಸಿ ರಾಜ್ಯೋತ್ಸವ ಸಂದೇಶ ನೀಡಿದರು.
ಸುಮಾರು 19 ಆಡಳಿತ ಭಾಗಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳು, ಬ್ರಿಟಿಷರ ಆಡಳಿತದ ನಂತರ ಮತ್ತೆ ಒಂದಾಗಿದ್ದು, ನಮ್ಮೆಲ್ಲರ ಹೆಮ್ಮೆಯ ಸಂಗತಿ. ಕರ್ನಾಟಕ ಏಕೀಕರಣದ ಚಳವಳಿಯು ಇದೇ ನಮ್ಮ ಧಾರವಾಡದ ನೆಲದಲ್ಲಿ ಜನ್ಮ ತಾಳಿದ್ದು ನಮಗೆಲ್ಲ ಅಭಿಮಾನದ ಸಂಗತಿ ಎಂದರು.
ರಾ.ಹ.ದೇಶಪಾಂಡೆ ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಓದುವಾಗ ತಮಗಾದ ನೋವುಗಳಿಂದ ನೊಂದಿದ್ದರು. 1887 ರಿಂದಲೇ ಕನ್ನಡ ಭಾಷೆಯ ದೀನ ಸ್ಥಿತಿಯನ್ನು ದೂರ ಮಾಡುವುದಕ್ಕಾಗಿ ಕನ್ನಡ ಜನರ ಸಹಾಯದಿಂದ ಒಂದು ಸಂಘ ಸ್ಥಾಪಿಸಲು ಅವರು ಪ್ರಯತ್ನಿಸುತ್ತಿದ್ದರು. ಅವರ ಪ್ರಯತ್ನದ ಫಲವಾಗಿ ಜುಲೈ 20, 1890 ರಲ್ಲಿ ಧಾರವಾಡದಲ್ಲಿ ಸಮಾನ ಮನಸ್ಕರ ಸಹಕಾರದೊಂದಿಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದರು ಎಂದರು.
ಕನ್ನಡಿಗರನ್ನು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಒಂಗೂಡಿಸಲು ಧಾರವಾಡದಲ್ಲಿ ನಡೆದ ಚಳುವಳಿ, ಹೋರಾಟಗಳು ಇಡೀ ರಾಜ್ಯಕ್ಕೆ ದಿಕ್ಸೂಚಿಯಾಗಿದ್ದವು. ಡೆಪ್ಯೂಟಿ ಚನ್ನಬಸಪ್ಪನವರು ಕನ್ನಡ ಮಾಧ್ಯಮ ಶಿಕ್ಷಣಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಿರುವುದನ್ನು ನಾವೆಲ್ಲ ಸದಾಕಾಲ ನೆನೆಯಬೇಕು. ಕರ್ನಾಟಕ ಏಕೀಕರಣಕ್ಕೆ ಒತ್ತಾಯಿಸಿ ಹುಬ್ಬಳ್ಳಿ ಸಮೀಪದ ಅದರಗುಂಚಿ ಗ್ರಾಮದಲ್ಲಿ ಅಂದಿನ ನೇತಾರರಾಗಿದ್ದ ಅದರಗುಂಚಿ ಶಂಕರಗೌಡ ಪಾಟೀಲರು 23 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದು ಸ್ಮರಿಸಿದರು.
ಸುದೀರ್ಘ ಹೋರಾಟದ ಫಲವಾಗಿ 1956ರ ನ.1ರಂದು ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಅಖಂಡವಾಗಿ ಮೈಸೂರು ರಾಜ್ಯದಲ್ಲಿ ಒಂದುಗೂಡಿದವು. ನಂತರದಲ್ಲಿ ಅದು ಕರ್ನಾಟಕ ಎಂದು ಮರುನಾಮಕರಣ ಗೊಂಡಿತು.
ಕನ್ನಡದ “ಮೊಟ್ಟ ಮೊದಲ ಕವಿ ಪಂಪ” ಇದೇ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದವರು. ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದೇ ಹೆಸರಾದ ಕುಮಾರವ್ಯಾಸ ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡ ಗ್ರಾಮದವರು. ಆದಿಕವಿ ಪಂಪನಿಂದ ಹಿಡಿದು, ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ವರಕವಿ ಡಾ.ದ.ರಾ.ಬೇಂದ್ರೆ, ಡಾ.ವಿ.ಕೃ.ಗೋಕಾಕ, ಡಾ.ಗಿರೀಶ ಕಾರ್ನಾಡ ನಮ್ಮ ಧಾರವಾಡದವರು ಎಂಬುದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು.
ಹೋರಾಟದಲ್ಲಿ ತೊಡಗಿದ್ದ ರಾ.ಹ.ದೇಶಪಾಂಡೆ, ಸರ್.ಸಿದ್ಧಪ್ಪ ಕಂಬಳಿ, ಬಿ.ಬಸವಲಿಂಗಪ್ಪ, ಹಳ್ಳಿಕೇರಿ ಗುದ್ಲೆಪ್ಪನವರು, ಆಲೂರು ವೆಂಕಟರಾಯರು, ಡಿ.ಪಿ.ಕರಮಕರ್, ರಂಗನಾಥ ದಿವಾಕರ್, ಮೊಹರೆ ಹಣಮಂತರಾಯರು, ಟಿ.ಆರ್.ನೇಸ್ವಿ, ಶ್ರೀರಂಗರು, ಹೊಸಮನಿ ಸಿದ್ಧಪ್ಪ, ವೀರನಗೌಡ ಪಾಟೀಲ, ಕೆ.ಎಫ್.ಪಾಟೀಲ ಮೊದಲಾದ ಮಹಾನ್ ವ್ಯಕ್ತಿಗಳ ನೇತೃತ್ವದಲ್ಲಿ ಸಹಸ್ರಾರು ಜನ ಕನ್ನಡಿಗರು ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಗಾಗಿ ಹಗಲಿರುಳು ದುಡಿದಿದ್ದಾರೆ. ಚೇತನಗಳನ್ನು ಕೃತಜ್ಞತೆಯಿಂದ ಸ್ಮರಿಸಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಪೊಲೀಸ್ ಆಯುಕ್ತ ಲಾಬುರಾಮ್ ಸೇರಿದಂತೆ ಅನೇಕರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss