Wednesday, August 17, 2022

Latest Posts

7 ರಾಜ್ಯಗಳಲ್ಲಿದೆ ಹಕ್ಕಿ ಜ್ವರ: ಇನ್ನು ಸಿಗಲಿಲ್ಲ ದೆಹಲಿ, ಮಹಾರಾಷ್ಟ್ರದ ವರದಿ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೇಶಾದ್ಯಂತ ಹಕ್ಕಿ ಜ್ವರದ ಭೀತಿ ಆವರಿಸಿದ್ದು, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶ ಗಳಲ್ಲಿ ಕಾಯಿಲೆ ಹರಡುತ್ತಿರುವುದು ದೃಢವಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಇನ್ನು ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಮೃತಪಟ್ಟ ಹಕ್ಕಿಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸ್ಪಷ್ಟತೆ ಸಿಗಲಿದೆ.
ಹರಿಯಾಣದ ಪಂಚಕುಲ ಜಿಲ್ಲೆಯ ಎರಡು ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಹಕ್ಕಿಜ್ವರ ದೃಢವಾದ ನಂತರ ರಾಜ್ಯ ಸರ್ಕಾರವು ಒಂಭತ್ತು ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ನಿಯೋಜಿಸಿದೆ.
ಗುಜರಾತ್‌ನ ಸೂರತ್ ಮತ್ತು ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಕಾಗೆ, ಕಾಡು ಪಕ್ಷಿಗಳ ಮಾದರಿಗಳಲ್ಲಿ ಹಕ್ಕಿ ಜ್ವರ ಇರುವುದು ದೃಢವಾಗಿದೆ. ಇದಲ್ಲದೆ ಕಾಂಗ್ರಾ ಜಿಲ್ಲೆಯಿಂದ (ಹಿಮಾಚಲ ಪ್ರದೇಶ) 86 ಕಾಗೆಗಳ ಅಸಾಮಾನ್ಯ ಸಾವಿನ ವರದಿಗಳು ಬಂದಿವೆ ಎಂದು ತಿಳಿಸಿದೆ.
ಉತ್ತರಾಖಂಡ್​ನ ಭಂಡಾರಿಬಾಗ್​ನಲ್ಲಿಯೂ ಸುಮಾರು 121 ಕಾಗೆಗಳು ಹಕ್ಕಿ ಜ್ವರಕ್ಕೆ ತುತ್ತಾಗಿವೆ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿದೆ.
ಈ ನಡುವೆ, ದೇಶದ ಹಕ್ಕಿ ಜ್ವರ ಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ರಚಿಸಲಾದ ಕೇಂದ್ರ ತಂಡಗಳು ನಿಯೋಜಿತ ಸ್ಥಳಗಳಿಗೆ ಭೇಟಿ ನೀಡುತ್ತಿವೆ. ಕೇಂದ್ರ ತಂಡಗಳಲ್ಲಿ ಈಗಾಗಲೇ ಒಂದು ತಂಡ ಜನವರಿ 9ರಂದು ಕೇರಳ ತಲುಪಿದೆ. ಇದು ಈಗಾಗಲೇ ತನ್ನ ಕಾರ್ಯವನ್ನು ಪ್ರಾರಂಭಿಸಿದ್ದು, ಪ್ರಸ್ತುತ ಕೇಂದ್ರ ಬಿಂದುಗಳ ಸ್ಥಳಗಳ ಮೇಲೆ ನಿಗಾ ವಹಿಸುತ್ತಿದೆ ಮತ್ತು ಸಾಂಕ್ರಾಮಿಕ ರೋಗಗಳ ತನಿಖೆ ನಡೆಸುತ್ತಿದೆ. ಮತ್ತೊಂದು ಕೇಂದ್ರ ತಂಡ ಜನವರಿ 10ರಂದು ಹಿಮಾಚಲ ಪ್ರದೇಶ ತಲುಪಿದ್ದು, ಸಮೀಕ್ಷೆ ನಡೆಸುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!