ಹೊಸದಿಗಂತ ವರದಿ,ಮೈಸೂರು:
ವ್ಯಕ್ತಿಯೊಬ್ಬರಿಂದ ಜಮೀನು ಸರ್ವೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಭೂಮಾಪಕ ಅಧಿಕಾರಿಯೊಬ್ಬ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಮೈಸೂರು ತಾಲ್ಲೂಕು ಕಚೇರಿಯಲ್ಲಿ ಭೂಮಾಪನಾ ಇಲಾಖೆಯ ಸರ್ವೆಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಹನುಮಂತರಾಯಪ್ಪ ಸಿಕ್ಕಿ ಬಿದ್ದವ. ಈತ ವ್ಯಕ್ತಿಯೊಬ್ಬರಿಂದ ಜಮೀನು ಸರ್ವೇ ಮಾಡಿಕೊಡಲು 10 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಆಗೂ, ಹೀಗೂ ಚೌಕಾಸಿ ನಡೆಸಿ, ಕೊನೆಗೆ 8 ಸಾವಿರ ರೂ ಕೊಟ್ಟರೆ ಮಾತ್ರ ಸರ್ವೇ ಮಾಡಿಕೊಡುವುದಾಗಿ ತಿಳಿಸಿದ್ದ.
ಇದರಿಂದ ಬೇಸರಗೊಂದ ಆ ವ್ಯಕ್ತಿ ಎಸಿಬಿಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು ಮೈಸೂರು ತಾಲ್ಲೂಕು ಕಚೇರಿಯಲ್ಲಿ 8 ಸಾವಿರ ರೂ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿ, ಭೂಮಾಪನಾ ಇಲಾಖೆಯ ಸರ್ವೆಯರ್ ಹನುಮಂತರಾಯಪ್ಪ ಅವರನ್ನು ವಶಕ್ಕೆ ಪಡೆದಿದ್ದಾರೆ.
ಎಸಿಬಿ ಎಸ್ಪಿ ಡಾ.ಸುಮ್ ಡಿ ಪನೇಕರ್ ಮಾರ್ಗದರ್ಶನದಲ್ಲಿ ಡಿಎಸ್ಪಿ ಎಚ್.ಪರಶುರಾಮಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.