ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗು ಹಸಿವು ಅಂತ ಹೇಳೋಕು ಮುಂಚೆಯೇ ಅನ್ನ ನೀಡುವವಳು ತಾಯಿ ಮಾತ್ರ. ಆದ್ರೆ ಈ ಘಟನೆಯಲ್ಲಿ ಎಲ್ಲಾ ಉಲ್ಟಾ ಎಂಟು ವರ್ಷದ ಬಾಲಕನೊಬ್ಬ ಅಳುತ್ತಾ ಬಂದು ತನ್ನ ತಾಯಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ನಮ್ಮ ಅಮ್ಮ ನನಗೆ ಅನ್ನ ನೀಡುತ್ತಿಲ್ಲ ಸರ್, ಊಟ ಕೇಳಿದ್ರೆ ಹೊಡೆಯುತ್ತಾರೆ ಎಂದು ಬಾಲಕನ ಮಾತು ಕೇಳಿ ಪೊಲೀಸರೇ ತಬ್ಬಿಬ್ಬಾಗಿದ್ದಾರೆ.
ಬಿಹಾರದ ಸೀತಾಮಧಿಯ ಚಂದ್ರಿಕಾ ಮಾರ್ಕೆಟ್ ಸ್ಟ್ರೀಟ್ನಲ್ಲಿ ಎಂಟು ವರ್ಷದ ಬಾಲಕನೊಬ್ಬ ನಗರ ಪೊಲೀಸರನ್ನು ಸಂಪರ್ಕಿಸಿದ್ದಾನೆ. ಅಳುತ್ತಾ..’ಸರ್..ನಮ್ಮಮ್ಮ ಅನ್ನ ಕೊಡುತ್ತಿಲ್ಲ ಕೇಳಿದರೆ ಹೊಡೆಯುತ್ತಾರೆ. ಮೊನ್ನೆ ಊಟ ಮಾಡುತ್ತಿದ್ದರೆ ತಟ್ಟೆ ಕಸಿದು ಎಸೆದಿದ್ದಾರೆ ಎಂದು ದೂರಿದ್ದಾನೆ. ಬಾಲಕನ ಮಾತು ಕೇಳಿ ಪೊಲೀಸರಿಗೆ ಸ್ವಲ್ಪ ಹೊತ್ತು ಏನು ಮಾಡಬೇಕೆಂದು ತೋಚಲಿಲ್ಲ. ಕೆಲ ಕ್ಷಣಗಳ ಬಳಿಕ ‘ನಿನಗೆ ಹಸಿವಾಗಿದೆಯೇ? ಎಂದು ಕೇಳಿ ಕೂಡಲೇ ಊಟ ತರಿಸಿಕೊಟ್ಟು ಬಾಲಕನ ಹೊಟ್ಟೆ ತುಂಬಿಸಿದರು. ಬಳಿಕ ಬಾಲಕನ ಎಲ್ಲಾ ವಿಚಾರಗಳಲ್ಲು ಸಮಾಧಾನದಿಂದ ಕೇಳಿ ತಿಳಿದುಕೊಂಡರು.
ಬಾಲಕನ ನೀಡಿದ ಮಾಹಿತಿ ಆಧಾರದ ಮೇಲೆ ಬಾಲಕನನ್ನು ಮನೆಗೆ ಕರೆದೊಯ್ದಿದ್ದಾರೆ. ತಾಯಿಯನ್ನು ವಿಚಾರಣೆಗೆ ಒಳಪಡಿಸಿ ವಾರ್ನಿಂಗ್ ಕೊಟ್ಟಿದ್ದಾರೆ. ಮಗುವಿಗೆ ಹೊಡೆಯದಂತೆ ಎಚ್ಚರಿಕೆ ಕೂಡ ನೀಡಲಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿ ರಾಕೇಶ್ ಕುಮಾರ್ ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.