9 ವರ್ಷದ ಹಿಂದೆ ಅಪಹರಣವಾಗಿದ್ದ ಬಾಲಕಿಗೆ ಪೋಷಕರನ್ನು ಹುಡುಕಿಕೊಟ್ಟ google! ಘಟನೆ ಹಿಂದಿದೆ ಹೃದಯಸ್ಪರ್ಶಿ ಕಥೆ…

ಹೊಸದಿಗಂತ ಡಿಜಿಟಲ್‌ ಡೆಸ್ಕ್
 2013ರಲ್ಲಿ ವ್ಯಕ್ತಿಯೊಬ್ಬನಿಂದ ಅಪಹರಣಕ್ಕೆ ಒಳಗಾಗಿ ನಾನಾ ಕಷ್ಟಗಳನ್ನು ಎದುರಿಸಿದ ಬಾಲಕಿಯೊಬ್ಬಳು ಒಂಬತ್ತು ವರ್ಷಗಳ ನಂತರ ಗೂಗಲ್‌ ಬಳಸಿಕೊಂಡು ಮತ್ತೆ ತನ್ನ ಕುಟುಂಬವನ್ನು ಸೇರಿದ ಹೃದಯಸ್ಪರ್ಶಿ ಘಟನೆ ಮುಂಬೈನಲ್ಲಿ ನಡೆದಿದೆ.

ಮಕ್ಕಳಿಲ್ಲದ ಕೊರಗಿನಲ್ಲಿದ್ದ ಆತ ಬಾಲಕಿಯನ್ನು ಅಪಹರಿಸಿದ್ದ.. 

2013 ರ ಜನವರಿ 22 ರಂದು ಮುಂಬೈನ ಪಶ್ಚಿಮ ಅಂಧೇರಿಯ ಬಾಲಕಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಅಣ್ಣನೊಂದಿಗೆ ಶಾಲೆಗೆ ಹೋಗುತ್ತಿದ್ದಾಗ ಪಾಕೆಟ್ ಮನಿ ವಿಚಾರವಾಗಿ ಜಗಳವಾಡಿ ಮುನಿಸಿಕೊಂಡಿದ್ದ ಬಾಲಕಿ ಶಾಲೆಗೆ ಹೋಗದೆ ಶಾಲೆ ಸಮೀಪದ ಸ್ಥಳಗಳಲ್ಲಿ ಸುತ್ತಾಡಿದ್ದಳು. ಆ ಬಳಿಕ ಆಕೆಯ ಪತ್ತೆಯೇ ಇರಲಿಲ್ಲ. ಸಂಜೆಯಾದರೂ ಆಕೆ ಮನೆಗೆ ಬಾರದಿದ್ದರಿಂದ ಆತಂಕಗೊಂಡ ಪೋಷಕರು ಎಲ್ಲಡೆ ಹುಡುಕಾಟ ನಡೆಸಿದ್ದರು. ಆಕೆಯ ಸುಳಿವು ಸಿಕ್ಕದಿದ್ದರಿಂದ ಅಂತಿಮವಾಗಿ ಡಿಎನ್ ನಗರ ಪೊಲೀಸ್ ಠಾಣೆಗೆ ತೆರಳಿ ಮಗಳನ್ನು ಹುಡುಕಿಕೊಡುವಂತೆ ದೂರು ನೀಡಿ ಬೇಡಿಕೊಂಡಿದ್ದರು.
ಅತ್ತ ಶಾಲೆ ತಪ್ಪಿಸಿಕೊಂಡು ಅಲೆದಾಡುತ್ತಿದ್ದ ಬಾಲಕಿ ಅಂದು ಅದೇ ಮಾರ್ಗವಾಗಿ ಸಾಗುತ್ತಿದ್ದ ಡಿಸೋಜಾ ಎಂಬಾತನ ಕಣ್ಣಿಗೆ ಬಿದ್ದಿದ್ದಾಳೆ. ವಿವಾಹವಾಗಿ ಅನೇಕ ವರ್ಷಗಳಾದರೂ ಮಕ್ಕಳಾಗದ ಚಿಂತೆಯಲ್ಲಿದ್ದ ಡಿಸೋಜಾನ ಗಮನ ಬಾಲಕಿಯತ್ತ ಹರಿದಿದೆ. ಹೊತ್ತಿರ ಹೋಗಿ ಮಾತನಾಡಿಸಿದವನಿಗೆ ಅವಳನ್ನು ಕರೆದೊಯ್ಯುವ ಆಸೆ ಮೂಡಿದೆ. ಯಾರೂ ತನ್ನನ್ನು ಗಮನಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಡಿಸೋಜಾ ಬಾಲಕಿಯನ್ನು ಅಪಹರಿಸಿ ತನ್ನ ಮನೆಗೆ ಕರೆದೊಯ್ದಿದ್ದಾನೆ.
ಮಕ್ಕಳ ನಗುವಿನ ಸದ್ದೇ ಕೇಳದೆ ನೀರವ ಮೌನ ಹೊತ್ತಿದ್ದ ಆತನ ಮನೆಯಲ್ಲಿ ಬಾಲಕಿಯ ಪ್ರವೇಶದಿಂದ ಜೀವಕಳೆ ತುಂಬಿಕೊಂಡಿದೆ. ಆತನ ಹೆಂಡತಿಯೂ ಸಂತಸಗೊಂಡಿದ್ದಾಳೆ. ಆದರೆ, ಮಗಳ ನಾಪತ್ತೆಯ ನಂತರ ಹುಡುಗಿಯ ಕುಟುಂಬ ಸುಮ್ಮನಿರಲಾರರು, ಪೊಲೀಸರು ತನ್ನ ಬೆನ್ನು ಬೀಳುತ್ತಾರೆ ಎಂಬುದನ್ನು ಅರಿತಿದ್ದ ಡಿಸೋಜಾ, ಬಾಲಕಿ ಅಲ್ಲಿರುವುದು ತನಗೆ ಸೇಫ್‌ ಅಲ್ಲ ಎಂದು ನಿರ್ಧರಿಸಿ, ಆಕೆಯನ್ನು ತನ್ನ ಹುಟ್ಟೂರು ಕರ್ನಾಟಕದ ರಾಯಚೂರಿನಲ್ಲಿರುವ ಹಾಸ್ಟೆಲ್‌ಗೆ ಹೋಗಿ ಸೇರಿಸಿಬಂದಿದ್ದ.

ಬಾಲಕಿಗೆ ಮಲತಾಯಿ ಕಿರುಕುಳ..

2016ರಲ್ಲಿ ಡಿಸೋಜಾ ದಂಪತಿಗೆ ಸ್ವಂತ ಮಗುವಾಗಿದೆ. ಆ ವೇಳೆಗೆ ಬಾಲಕಿಯ ಪೋಷಕರು ಹುಡುಕಾಟ ಕಡಿಮೆ ಮಾಡಿರುತ್ತಾರೆ ಎಂದು ನಿರ್ಧರಿಸಿದ ಡಿಸೋಜಾ ಕರ್ನಾಟಕದಿಂದ ಹುಡುಗಿಯನ್ನು ಮರಳಿ ಕರೆದುಕೊಂಡು ಬಂದಿದ್ದಾರೆ. ಆ ವೇಳೆಗೆ ಅವರಿಗೆ ಆ ಬಲಕಿಯ ಮೇಲಿನ ಪ್ರೀತಿಯೂ ಕಡಿಮೆಯಾಗಿದೆ. ಇಬ್ಬರು ಮಕ್ಕಳ ಪೋಷಣೆಯ ವೆಚ್ಚವನ್ನು ಭರಿಸಲು ಸಾಧ್ಯವಾಗದ ಕಾರಣ ಬಾಲಕಿಯನ್ನು ಬೇಬಿ ಸಿಟ್ಟರ್ ಆಗಿ ಮನೆಯೊಂದರಲ್ಲಿ ಚಾಕರಿಗೆ ಕಳುಹಿಸಿದ್ದಾರೆ.
ಡಿಸೋಜಾನ ಹೆಂಡತಿ ಬಾಲಕಿಗೆ ಯಾವಾಗಲೂ ಹೊಡೆಯುತ್ತಿದ್ದಳು. ಆ ಸಂದರ್ಭದಲ್ಲಿ ತನ್ನ ಗಂಡ ಕುಡಿದು ಅವಳನ್ನು ಎಲ್ಲಿಂದಲೋ ಕರೆದುಕೊಂಡು ಬಂದಿದ್ದಾನೆ ಎಂದು ಬಾಲಕಿಯನ್ನು ಮೂದಲಿಸುತ್ತಿದ್ದಳು. ಆ ವೇಳೆಗೆ ಕೊಂಚಮಟ್ಟಿಗೆ ತಿಳುವಳಿಕೆ ಬೆಳೆಸಿಕೊಂಡಿದ್ದ ಬಾಲಕಿ ದಂಪತಿಗಳು ತನ್ನ ಹೆತ್ತವರಲ್ಲ ಎಂಬುದನ್ನು ಗ್ರಹಿಸಿದ್ದಾಳೆ. ಆದರೆ ಅವಳು ಅವರಿಗೆ ತುಂಬಾ ಹೆದರುತ್ತಿದ್ದಳು. ಅಲ್ಲಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದು ಆಕೆಗೆ ತಿಳಿದಿರಲಿಲ್ಲ.
ಮತ್ತೆ ಪೋಷಕರನ್ನು ಪತ್ತೆ ಮಾಡಿದ್ದು ಹೇಗೆ?
ಬಾಲಕಿ ಬೇಬಿ ಸಿಟ್ಟರ್ ಆಗಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಇನ್ನೊಬ್ಬಳು ಮನೆ ಸಹಾಯಕಿಯಿದ್ದಳು. ಬಾಲಕಿ ಕಥೆಯನ್ನು ಕೇಳಿದ ನಂತರ, ಅವಳಿಗೆ ಸಹಾಯ ಮಾಡಲು ನಿರ್ಧರಿಸಿದಳು. ಅದಕ್ಕಾಗಿ ಅವಳು ಗೂಗಲ್‌ನಲ್ಲಿ ಅವಳ ಹೆಸರನ್ನು ಹುಡುಕಿದಳು. ʼಬಾಲಕಿ ಕಾಣೆಯಾದ ನಂತರ ನೀಡಲಾಗಿದ್ದ ಪ್ರಕಟಣೆಗಳು ಮತ್ತು ಅವಳಿಗೆ ಸಂಬಂಧಿಸಿದ ಬರಹಗಳನ್ನು ಪತ್ತೆ ಮಾಡಿದಳು.
ಗೂಗಲ್‌ನಲ್ಲಿ ತನ್ನ ಛಾಯಾಚಿತ್ರಗಳನ್ನು ನೋಡಿದ ಬಾಲಕಿಗೆ ಹಳೆಯದೆಲ್ಲಾ ನೆನಪಾಗಿದೆ. ಆವೇಳೆ ಆಕೆ ತನ್ನ ನೆರೆಹೊರೆಯಲ್ಲಿ ವಾಸಿಸುತ್ತಿದ್ದವರು ಸೇರಿದಂತೆ ಎಲ್ಲವನ್ನೂ ನೆನಪಿಸಿಕೊಂಡಿದ್ದಾಳೆ. ಆ ಬಳಿ ಅವರು ಆನ್‌ಲೈನ್‌ನಲ್ಲಿ ಕಾಣೆಯಾದ ಪೋಸ್ಟರ್‌ನಲ್ಲಿ ಐದು ಸಂಪರ್ಕ ಸಂಖ್ಯೆಗಳನ್ನು ಕಂಡುಕೊಂಡಿದ್ದಾರೆ. ಅವರ ದುಿರಾದೃಷ್ಟಕ್ಕೆ ನಾಲ್ಕು ಸಂಖ್ಯೆಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಕುಟುಂಬದ ನೆರೆಹೊರೆಯ ವ್ಯಕ್ತಿಯೊಬ್ಬನ ಐದನೇ ಸಂಖ್ಯೆಯು ಕೆಲಸ ಮಾಡಿದೆ.
ಕರೆ ಸ್ವೀಕರಿಸಿದ ಆತ ತಕ್ಷಣವೇ ವಿಡಿಯೋ ಕಾಲ್‌ ಮಾಡಿ ಅದನ್ನು ಸ್ಕ್ರೀನ್‌ಶಾಟ್ ತೆಗೆದುಕೊಂಡು ಅದನ್ನು ಹುಡುಗಿಯ ತಾಯಿ ಮತ್ತು ಚಿಕ್ಕಪ್ಪನಿಗೆ ತೋರಿಸಿದರು. 9 ವರ್ಷಗಳ ಬಳಿಕ ಸಿಕ್ಕಿದ ತಾಯಿ ಮಗಳು ಪರಸ್ಪರ ಕಣ್ಣೀರಿಟ್ಟಿದ್ದಾರೆ. ಅದಾದ ಬಳಿಕ ಹುಡುಗಿಯನ್ನು ಅಲ್ಲಿಂದ ರಕ್ಷಿಸಲಾಗಿದ್ದು, ಹುಡುಗಿ ಒಂಬತ್ತು ವರ್ಷಗಳ ಬಳಿಕ ಆಕೆಯ ಕುಟುಂಬವನ್ನು ಸೇರಿಕೊಂಡಿದ್ದಾಳೆ. ಘಟನೆಗೆ ಸಂಬಂಧಿಸದಂತೆ ಬಾಲಕಿಯನ್ನು ಅಪಹರಿಸಿದ್ದ ಜೋಸೆಫ್ ಡಿಸೋಜಾ ಮತ್ತು ಆತನ ಪತ್ನಿ ಸೋನಿಯನ್ನು ಪೊಲೀಸರು  ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!