ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಉತ್ತರಾಖಂಡ್ ನಲ್ಲಿ ಭಾರೀ ಮಳೆಯಿಂದ ಉಂಟಾದ ನೆರೆ ಮತ್ತು ಭೂಕುಸಿತದಲ್ಲಿ ಕರ್ನಾಟಕದ 96 ಮಂದಿ ಸಿಲುಕಿದ್ದು, ಅವರಲ್ಲಿ 92 ಜನ ಸುರಕ್ಷಿತವಾಗಿದ್ದಾರೆ. ಆದರೆ ನಾಲ್ವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಈ ಬಗ್ಗೆ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಮನೋಜ್ ರಾಜನ್ ಮಾಹಿತಿ ನೀಡಿದ್ದು, ರಾಜ್ಯದಿಂದ ಉತ್ತರಾಖಂಡ್ ರಾಜ್ಯಕ್ಕೆ ತೆರಳಿದ್ದ 96 ಜನರ ಪೈಕಿ 92 ಜನರನ್ನು ಪತ್ತೆ ಹಚ್ಚಲಾಗಿದ್ದು, ಅವರನ್ನು ಶಿಬಿರಗಳಿಗೆ ಕರೆತರಲಾಗಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಇನ್ನು ಮೂವರು ಬದ್ರಿನಾಥ್ ನಲ್ಲಿ ಸಿಲುಕಿದ್ದು, ನೆಟ್ ವರ್ಕ್ ಸಮಸ್ಯೆಯಿಂದಾಗಿ ಆಡಳಿತ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆದರೆ ಇನ್ನೊಬ್ಬ ವ್ಯಕ್ತಿ ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಬದ್ರಿನಾಥ್ ನಲ್ಲಿ ಸಿಲುಕಿರುವ ಮೂವರು ಬೆಂಗಳೂರಿನವರು. ಉತ್ತರಾಖಂಡದ ಹರಿದ್ವಾರ, ಕೇದಾರನಾಥ ಪ್ರವಾಸಕ್ಕೆ ತೆರಳಿದ್ದರು. ಅವರ ಜೀವಕ್ಕೆ ಯಾವುದೇ ಅಪಾಯವಾಗದಂತೆ ಕರೆತರುವ ೆಲ್ಲ ಪ್ರಯತ್ನಗಳು ನಡೆಯುತ್ತಿದೆ ಎಂದು ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹೇಳಿದರು.
ಸಹಾಯವಾಣಿ:
ರಾಜ್ಯದ ನೆರೆ ಸಂತ್ರಸ್ತರ ನೆರವಿಗಾಗಿ 24×7 ಸಹಾಯವಾಣಿ ತೆರೆಯಲಾಗಿದ್ದು, ತುರ್ತು ಸಂದರ್ಭದಲ್ಲಿ 080-22340676 ಅಥವಾ ಟೋಲ್ಫ್ರೀ 080-1070ಗೆ ಕರೆ ಮಾಡಬಹುದು. ಕೂಡಲೇ ಉತ್ತರಖಂಡದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ ರಕ್ಷಣೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.