ಹೊಸದಿಗಂತ ವರದಿ, ಮಡಿಕೇರಿ:
ಹುಲಿ ದಾಳಿಗೆ ಕಾರ್ಮಿಕರೊಬ್ಬರು ಬಲಿಯಾಗಿರುವ ಘಟನೆ ದಕ್ಷಿಣ ಕೊಡಗಿನ ವಿ.ಬಾಡಗ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮೃತರನ್ನು ಗದ್ದೆಮನೆ ನಿವಾಸಿ ಗಣೇಶ್ (ಪುಟ್ಟು-29) ಎಂದು ಗುರುತಿಸಲಾಗಿದೆ.
ವಿ.ಬಾಡಗ ಸಮೀಪದ ಒಂದನೇ ರುದ್ರಗುಪ್ಪೆಯ
ಕೊಂಗಂಡ ಅಯ್ಯಪ್ಪ ಅವರ ತೋಟದಲ್ಲಿ ಕರಿಮೆಣಸು ಕೊಯ್ಯುವ ಕೆಲಸಕ್ಕೆ ಬಂದಿದ್ದ ಗಣೇಶ್ ಮೇಲೆ ಹುಲಿ ದಾಳಿ ನಡೆಸಿದೆ. ಈ ಸಂದರ್ಭ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಕಳೆದ10 ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಅಟ್ರಂಗಡ ಸುಬ್ಬಯ್ಯ ಅವರ ಕರುವನ್ನು ಹುಲಿ ಬಲಿ ಪಡೆದುಕೊಂಡಿತ್ತು.
ವಿಷಯ ತಿಳಿದ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದು, ಹುಲಿಯನ್ನು ಸೆರೆ ಹಿಡಿಯದೆ ಮೃತದೇಹವನ್ನು ತೆಗೆಯಲು ಅವಕಾಣಸ ನೀಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಅಲ್ಲದೆ ಹುಲಿಗೆ ಕಂಡಲ್ಲಿ ಗುಂಡಿಕ್ಕಲು ಅವಕಾಶ ನೀಡುವಂತೆ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.