ಹೊಸ ದಿಗಂತ ವರದಿ , ಮಡಿಕೇರಿ:
ಅಡುಗೆ ಅನಿಲದ ಖಾಲಿ ಸಿಲಿಂಡರ್’ಗಳನ್ನು ಸಾಗಿಸುತ್ತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ನಂಜನಗೂಡು ನಿವಾಸಿ ಜಯಸೂರ್ಯ (25) ಎಂಬವರೇ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿ ಅಪಘಾತಕ್ಕೊಳಗಾಗಿ ಅಸುನೀಗಿದವರಾಗಿದ್ದಾರೆ.
ಮೈಸೂರಿನಿಂದ ಮಂಗಳೂರಿಗೆ ಅಡುಗೆ ಅನಿಲದ ಖಾಲಿ ಸಿಲಿಂಡರ್’ಗಳನ್ನು ಸಾಗಿಸುತ್ತಿದ್ದ ಲಾರಿಯ ಮುಂಭಾಗಕ್ಕೆ ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಹೀರೋ ಹೋಂಡಾ ಬೈಕ್ ಸೋಮವಾರ ಸಂಜೆ 5 ಗಂಟೆ ಸಮಯದಲ್ಲಿ ಸುಂಟಿಕೊಪ್ಪ ಸಮೀಪದ ಶಾಂತಿಗೇರಿ ಬಳಿ ಡಿಕ್ಕಿಯಾಗಿತ್ತು.
ಈ ಸಂದರ್ಭ ಬೈಕ್ ಸವಾರ ಜಯ ಸೂರ್ಯ ಹೆಲ್ಮೆಟ್ ಧರಿಸದಿದ್ದ ಕಾರಣ ಮುಖ ಹಾಗೂ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದು, ಮಡಿಕೇರಿಯಲ್ಲಿನ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ನಂತರ ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಾವಿಗೀಡಾಗಿದ್ದು, ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.