ಹೊಸ ದಿಗಂತ ವರದಿ, ಬಳ್ಳಾರಿ:
ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ದೇಗುಲಗಳಲ್ಲಿ ಶ್ರೀರಾಮ ನವಮಿಯನ್ನು ಗುರುವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಮೀಪದ ಶ್ರೀರಾಮ ಮಂದಿರಕ್ಕೆ ಭಕ್ತರು ತೆರಳಿ ವಿಶೇಷ ಪೂಜೆ, ಅರ್ಚನೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ನಗರದ ಶ್ರೀರಾಪುರ ಕಾಲೋನಿಯ ಶ್ರೀರಾಮಂದಿರ, ರಾಯಲ್ ಕಾಲೋನಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ, ಶ್ರೀ ರಾಘವೇಂದ್ರ ಸ್ವಾಮೀ ಮಠ, ಶ್ರೀಮದುತ್ತರಾಧಿ ಮಠ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಶ್ರೀರಾಮ ನವಮಿ ನಿಮಿತ್ತ ವಿವಿಧ ಪೂಜೆ, ಅಲಂಕಾರ, ಮಹಾನೈವೇದ್ಯ, ಮಹಾಮಂಗಳಾರತಿ, ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು.
ವಿಶೇಷ ಪೂಜೆ
ನಗರದ ಶ್ರೀರಾಮ ಪುರ ಕಾಲೋನಿಯ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ ವಿಶೇಷ ಪೂಜೆ, ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ, ಮಹಾನೈವೇದ್ಯ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ನಡೆದವು. ಶ್ರೀರಾಮ ಕಲ್ಯಾಣೊತ್ಸವ ವಿಜೃಂಭಣೆಯಿಂದ ನೆರವೇರಿತು. ಸಂಜೆ ಸಾವಿರಾರು ಭಕ್ತರ ಮಧ್ಯೆ ಶೋಭಯಾತ್ರೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಶೋಭಯಾತ್ರೆಯಲ್ಲಿ ಉಡುಪಿಯ ಚಂಡಿ ವಾದ್ಯ, ಕೋಲಾಟ, ವಿವಿಧ ಭಜನಾ ಮಂಡಳಿ ಸದಸ್ಯರಿಂದ ಸಾಮೋಹಿಕ ಭಜನೆ, ವಿವಿಧ ಕಲಾ ತಂಡಗಳು ಶೋಭಯಾತ್ರೆಯಲ್ಲಿ ಗಮನಸೆಳೆಯಿತು. ಶೋಭಯಾತ್ರೆ ದೇಗುಲದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬಿದಿಗಳಲ್ಲಿ ಸಂಚರಿಸಿತು. ಈ ವೇಳೆ ಅನೇಕ ಭಕ್ತರು, ಪಾನಕ, ಕೋಸಂಬರಿ, ಮಜ್ಜಿಗೆ ವಿತರಿಸಿ ಶ್ರೀರಾಮನ ಸೇವೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಉತ್ತರ ಕರ್ನಾಟಕ ಸದಸ್ಯ ಶ್ರೀರಾಮ್, ಭಜರಂಗದಳದ ಜಿಲ್ಲಾಧ್ಯಕ್ಷ ಗೋವಿಂದ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನೀಲ್ ನಾಯ್ಡು, ದೇಗುಲದ ಟ್ರಸ್ಟಿ ವೆಂಕಟೇಶ, ಉದ್ಯಮಿ ಸಂತೋಷ್ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು. ಈ ವೇಳೆ ಜೈ ಶ್ರೀರಾಮ್, ಜೈ ಶ್ರೀರಾಮ್ ನಾಮಸ್ಮರಣೆ ಗಮನಸೆಳೆಯಿತು.