ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಂತಿದೆ. ದೇಶದಲ್ಲಿ ಬಲವಂತದ ಮತಾಂತರ ಸಲ್ಲದು ಎಂಬ ಗಾಂಧೀಜಿ-ಅಂಬೇಡ್ಕರ್ ಆಶಯಗಳು ಕಾಂಗ್ರೆಸ್ಸಿಗೆ ಇದೀಗ ಬೇಡವಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಟಿಪ್ಪುವಿನ ಮತಾಂತರದ ಸಿದ್ಧಾಂತಕ್ಕೆ ಪೂರಕವಾಗಿ ರಾಜ್ಯ ಸರಕಾರ ಕೆಲಸ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಪಕ್ಷವು ಪಿಎಫ್‍ಐ, ಕೆಎಫ್‍ಡಿ ಪರವಾಗಿದೆಯೇ? ಎಂದು ಪ್ರಶ್ನಿಸಿದ ಅವರು, ಈ ರೀತಿ ಜನಾದೇಶದ ದುರ್ಬಳಕೆಗೆ ಬಿಜೆಪಿ ಎಂದಿಗೂ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು. ರಾಜ್ಯದಲ್ಲಿ ನೀವು ಯಾರ ಪರ ಇದ್ದೀರಿ? ಎಂಬುದಕ್ಕೆ ಮೊದಲು ಉತ್ತರ ಕೊಡಿ. 30ರಿಂದ 40 ಲಕ್ಷಕ್ಕೂ ಹೆಚ್ಚು ಹಿಂದುಗಳು ದುಡ್ಡಿನ ಆಮಿಷ, ಲವ್ ಜಿಹಾದ್, ಆಸ್ಪತ್ರೆಯಲ್ಲಿ ಬಿಲ್ ಕಟ್ಟಲು ಆಗದೆ ಮತಾಂತರ ಆದ ಸ್ಪೋಟಕ ಮಾಹಿತಿ ಇದೆ ಎಂದು ವಿವರಿಸಿದರು.
ಕಾಂಗ್ರೆಸ್ ಯಾರಿಗಾಗಿ ಈ ಕಾಯ್ದೆ ತರುತ್ತಿದೆ? ಬಲವಂತದ ಮತಾಂತರ ಸಲ್ಲದು ಎಂಬ ಭಾವನೆ ಹಾಗೂ ನಿಲುವನ್ನು ಮಹಾತ್ಮ ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ಹೊಂದಿದ್ದರು ಎಂಬುದನ್ನು ಕಾಂಗ್ರೆಸ್ ಸರ್ಕಾರ ಮರೆತಂತಿದೆ. ಮತಾಂತರ ಆಗುವುದಾದರೆ ಕಾನೂನು ಪ್ರಕಾರ ಆಗಬೇಕೆಂಬ ನಮ್ಮ ಕಾಯ್ದೆಯಲ್ಲಿ ತಪ್ಪೇನಿದೆ? ಎಂದು ಗಟ್ಟಿಯಾಗಿಯೇ ಪ್ರಶ್ನೆ ಮಾಡಿದರು.
ಟಿಪ್ಪು ಕೊಡಗಿನಲ್ಲಿ 50ರಿಂದ 60 ಸಾವಿರ ಜನರನ್ನು ಮತಾಂತರ ಮಾಡಿದ್ದ. ಆತನನ್ನು ವೈಭವೀಕರಿಸಿ ಅವನ ಜಯಂತಿ ಮಾಡಿ ಗಲಭೆಗೆ ಕಾರಣರಾದರು. ಈ ಕಾಯ್ದೆ ವಾಪಸ್ ಪಡೆಯಬಾರದು ಎಂದು ಬಿಜೆಪಿ ಆಗ್ರಹಿಸುತ್ತದೆ. ಮತಬ್ಯಾಂಕಿಗಾಗಿ, ಒಂದು ಸಮುದಾಯದವರನ್ನು ಓಲೈಸಲು ಈ ಕಾಯ್ದೆ ಹಿಂದಕ್ಕೆ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಓಟಿಗೋಸ್ಕರ ಯಾವ ಹಂತಕ್ಕಾದರೂ ಹೋಗುತ್ತದೆ ಎಂಬುದು ಇದರಿಂದಲೇ ಗೊತ್ತಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಇನ್ನೂ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಧ್ವನಿಯೆತ್ತಿದ ಅಶೋಕ್, ಪಠ್ಯಪುಸ್ತಕ ಬದಲಾವಣೆ ಬಗ್ಗೆ ತರಾತುರಿ ಸಲ್ಲದು. ಏಕಾಏಕಿ ಮಕ್ಕಳಿಗೆ ತೊಂದರೆ ಕೊಡುವ ಉದ್ದೇಶದಿಂದಾಗಿ ನಿಮ್ಮ ಸಿದ್ಧಾಂತವನ್ನು ಮಕ್ಕಳ ಮೇಲೆ ಹೇರುವ ಪ್ರಯತ್ನ ಮಾಡಿದ್ದೀರಿ. ಇದರಿಂದ ಕೆಟ್ಟ ಸಂದೇಶ ಕೊಡುವ ಪ್ರಯತ್ನ ನಿಮ್ಮದಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.