ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆ ಖರೀದಿಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವಿನ ಘರ್ಷಣೆ ವೇಳೆ ಗುಂಡಿನ ಚಕಮಕಿ ನಡೆದಿರುವ ಘಟನೆ ಹೈದರಾಬಾದ್‌ನ ಓಲ್ಡ್ ಟೌನ್ ನಲ್ಲಿ ಮಧ್ಯರಾತ್ರಿ ನಡೆದಿದೆ. ಮಸೂದ್ ಅಲಿ ಎಂಬ ವಕೀಲರು ಗಾಳಿಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಅರ್ಫಾತ್ ಎಂಬ ವ್ಯಕ್ತಿ ಕೆಲ ದಿನಗಳ ಹಿಂದೆ ಮನೆ ಖರೀದಿಸಿದ್ದ. ಆದರೆ, ಕಳೆದ ಕೆಲವು ದಿನಗಳಿಂದ ಈ ವಿಚಾರವಾಗಿ ಎರಡು ಕಡೆಯವರ ನಡುವೆ ವಾಗ್ವಾದ ನಡೆಯುತ್ತಿತ್ತು.
ವಿವಾದದ ಬಗ್ಗೆ ನ್ಯಾಯಾಲಯದಲ್ಲಿ ಕೇಸ್ ಇರುವಾಗಲೇ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಎರಡೂ ಕಡೆಯವರು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದಾರೆ. ಆದರೆ, ಅರ್ಫಾತ್ ಕಳೆದ ಶನಿವಾರ ಮತ್ತೊಮ್ಮೆ ಮೀರ್ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೀಗಾಗಿ ಶನಿವಾರ ಮಧ್ಯರಾತ್ರಿ ಮಸೂದ್ ಅಲಿ, ಅರ್ಫಾತ್ ಜತೆ ಜಗಳವಾಡಿದ್ದರು.
ಅವರನ್ನು ಹೆದರಿಸಲು ಮಸೂದ್ ಅಲಿ ತನ್ನ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ. ಎರಡೂ ಕಡೆಯವರು ಕಲ್ಲು, ದೊಣ್ಣೆಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರನ್ನೂ ಬಂಧಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.