ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಿಖ್ಖರ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಪಾಕಿಸ್ತಾನ ಹೈಕಮಿಷನ್ನ ಹಿರಿಯ ರಾಜತಾಂತ್ರಿಕರಿಗೆ ಸಮನ್ಸ್ ಜಾರಿ ಮಾಡಿದೆ. ಪಾಕಿಸ್ತಾನದಲ್ಲಿ ನೆಲೆಸಿರುವ ಸಿಖ್ಖರ ಮೇಲೆ ಹೆಚ್ಚುತ್ತಿರುವ ದಾಳಿಗಳ ಬಗ್ಗೆ ಭಾರತ ವಿವರಣೆ ಕೇಳಿದೆ. ಸಿಖ್ ಸಮುದಾಯದ ಮೇಲಿನ ದಾಳಿಯ ಪ್ರಕರಣವನ್ನು ಪ್ರಾಮಾಣಿಕವಾಗಿ ತನಿಖೆ ಮಾಡಲು ಮತ್ತು ತನಿಖಾ ವರದಿಯನ್ನು ಆದಷ್ಟು ಬೇಗ ಕಳುಹಿಸುವಂತೆ ಭಾರತ ಸರ್ಕಾರ ಪಾಕಿಸ್ತಾನದ ಅಧಿಕಾರಿಗಳಿಗೆ ನೀಡಿದ ಸಮನ್ಸ್ನಲ್ಲಿ ತಿಳಿಸಿದೆ.
ಸಿಖ್ ಸಮುದಾಯದ ಸದಸ್ಯರ ಮೇಲೆ ಹೆಚ್ಚುತ್ತಿರುವ ದಾಳಿಯ ಘಟನೆಗಳ ಬಗ್ಗೆ ಭಾರತ ಸರ್ಕಾರ ತನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಅಲ್ಪಸಂಖ್ಯಾತರ ಭದ್ರತೆಯನ್ನು ಪಾಕಿಸ್ತಾನ ಖಚಿತಪಡಿಸಿಕೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ. ಅಗತ್ಯಬಿದ್ದರೆ ಗಡಿಯಾಚೆಗಿನ ದಾಳಿಯ ಎಚ್ಚರಿಕೆಯನ್ನೂ ಸಹ ಭಾರತೀಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿದ್ದಾರೆ.
ಶನಿವಾರ ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಸಿಖ್ ಸಮುದಾಯದ ಸದಸ್ಯರೊಬ್ಬರು ಸಾವನ್ನಪ್ಪಿದ್ದರು. ಸಾವನ್ನಪ್ಪಿದ ವ್ಯಕ್ತಿಯನ್ನು ಮನಮೋಹನ್ ಸಿಂಗ್ ಎಂದು ಗುರುತಿಸಲಾಗಿದ್ದು, ಶನಿವಾರ ಕಕ್ಷಾಲ್ ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಹತ್ಯೆಗೀಡಾದರು. ಪಾಕಿಸ್ತಾನದಲ್ಲಿ ಪದೇ ಪದೇ ಸಿಖ್ಖರ ಹತ್ಯೆಯಿಂದಾಗಿ ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಸಿಖ್ಖರು ಅಭದ್ರತೆಯ ಭಾವನೆಯನ್ನು ಅನುಭವಿಸುತ್ತಿದ್ದಾರೆ. ಅಲ್ಪಸಂಖ್ಯಾತರ ರಕ್ಷಣೆಯಲ್ಲಿ ಪಾಕಿಸ್ತಾನ ಸರ್ಕಾರ ವಿಫಲವಾಗಿದೆ ಎಂದರೆ ತಪ್ಪೇನಿಲ್ಲ.