ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿನ ಬಿಜೆಪಿ ಆಡಳಿತದಲ್ಲಿ ನಡೆದಿದೆ ಎನ್ನಲಾದ ಎಲ್ಲಾ ಹಗರಣಗಳು ಮತ್ತು ಅಕ್ರಮಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ಕೊರೋನಾ ವೇಳೆ ಮೆಡಿಕಲ್ ವಸ್ತುಗಳ ಖರೀದಿಯಲ್ಲಿ ಅವ್ಯವಹಾರ, ಬಿಟ್ ಕಾಯಿನ್, 40% ಕಮಿಷನ್ ಆರೋಪ ಸೇರಿ ಚಾಮರಾಜನಗರದ ಆಕ್ಸಿಜನ್ ದುರಂತದ ಬಗ್ಗೆಯೂ ಮರು ತನಿಖೆ ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈಗಾಗಲೇ 5 ಗ್ಯಾರಂಟಿಗಳ ಪೈಕಿ ಒಂದು ಗ್ಯಾರಂಟಿ ಜಾರಿಯಾಗಿದೆ. ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಜುಲೈ 1ರಿಂದ ಗೃಹಜ್ಯೋತಿ ಯೋಜನೆಯನ್ನ ಕೂಡ ಜಾರಿಗೆ ತೀರ್ಮಾನ ಮಾಡಲಾಗಿದೆ. ಈಗಾಗಲೇ ಉಚಿತವಾಗಿ ತಲಾ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. 10 ಕೆಜಿ ಕೊಡಲು 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು. ಅಷ್ಟು ಪ್ರಮಾಣದ ಅಕ್ಕಿ ನಮಗೆ ಸಿಗುತ್ತಿಲ್ಲ. ಎಫ್ಸಿಐನವರು ಮೊದಲು ಅಕ್ಕಿ ಪೂರೈಸುವುದಾಗಿ ಹೇಳಿದ್ದರು. ಆ ನಂತರ ರಾಜ್ಯಕ್ಕೆ ಅಕ್ಕಿ ಕೊಡಲ್ಲ ಎಂದು ಹೇಳಿದೆ. ಕೇಂದ್ರದ ಬಳಿ ಅಕ್ಕಿ ಇದ್ದರೂ ರಾಜ್ಯಕ್ಕೆ ಕೊಡಲ್ಲ ಅಂತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.