ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆ ಕೊರತೆಯಿಂದ ನದಿಯಲ್ಲಿ ನೀರು ಸಂಪೂರ್ಣ ಬತ್ತಿ ಹೋದ ಪರಿಣಾಮ ರಬಕವಿ- ಬನಹಟ್ಟಿ ತಾಲೂಕಿನ ಮಹಿಷವಾಡಗಿ ಬ್ಯಾರೇಜ್ ಹತ್ತಿರದ ಕೃಷ್ಣೆಯ ಬಯಲಲ್ಲಿ ಸಾವಿರಾರು ಮೀನುಗಳು ನಿತ್ಯ ಸಾವನ್ನಪ್ಪುತ್ತಿವೆ.
ನೀರು ಸಂಪೂರ್ಣ ಖಾಲಿಯಾಗಿರುವುದರಿಂದ ಇರುವ ನೀರು ಕೊಳಚೆಯಾಗಿ ದುರ್ವಾಸನೆ ಬೀರುತ್ತಿದೆ. ನದಿಯೊಳಗೆ ಅಲ್ಲಲ್ಲಿ ಓಯಾಸಿಸ್ನಂತೆ ನಿಂತ ನೀರಿನ ಸುತ್ತ ಸತ್ತ ಮೀನುಗಳು ಎಲ್ಲೆಂದರಲ್ಲಿ ಬಿದ್ದಿವೆ.
ನದಿ ದಡದಲ್ಲಿನ ಕಲ್ಲುಗಳ ಸಂದಿಗಳಲ್ಲಿ, ಕೆಸರಿನಲ್ಲಿ ಮೀನುಗಳು ನೀರಿಲ್ಲದೆ ಸಾವನ್ನಪ್ಪುತ್ತಿವೆ. ನದಿ ನೀರೇ ಆಸರೆಯಾಗಿದ್ದ ಅದೆಷ್ಟೋ ಜೀವಿಗಳು ಕೃಷ್ಣೆಯ ಮಡಿಲಲ್ಲಿ ಸಾವನ್ನಪ್ಪುತ್ತಿವೆ. ಮೀನುಗಳು ಕೊಳೆಯಲಾರಂಭಿಸಿದ್ದು, ಇಡೀ ನದಿಯ ಪ್ರದೇಶವು ದುರ್ವಾಸನೆ ಬೀರುತ್ತಿರುವುದರಿಂದ ನದಿಯ ಬಳಿ ನಿಲ್ಲುವುದು ಕಷ್ಟವಾಗಿದೆ. ಮತ್ತೊಂದೆಡೆ ನದಿ ನೀರನ್ನೇ ಅವಲಂಬಿಸಿದ್ದ ಜನರು ಕಳೆದ ಕೆಲ ದಿನಗಳಿಂದ ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ.
ಈ ನದಿಯಲ್ಲಿ ಮತ್ತೆ ಮೀನುಗಳ ಆವಾಸ ಸ್ಥಾನ ಅಭಿವೃದಿ ಪಡಿಸಲು ಕನಿಷ್ಠ 5 ವರ್ಷಗಳಾದರೂ ಬೇಕು. ನಮ್ಮ ಕಣ್ಣಿಗೆ ಸಾಯುತ್ತಿರುವ ಮೀನುಗಳನ್ನು ನೋಡಲಾಗದೆ ತೀವ್ರ ನೋವುಂಟು ಮಾಡುತ್ತಿದೆ ಎಂದು ಡಾ. ರವಿ ಜಮಖಂಡಿ ಕಳವಳ ವ್ಯಕ್ತಪಡಿಸಿದರು.