ಹೊಸದಿಗಂತ ವರದಿ ರಾಯಚೂರು :
ಇಂದು ಗುರುವಾರ ಆಗಿರುವುದರಿಂದ ಗುರುರಾಯರ ದರ್ಶನ ಪಡೆಯುವುದಕ್ಕೆ ಸಾವಿರಾರು ಭಕ್ತಾದಿಗಳ ದಂಡೆ ಮಂತ್ರಾಲಯದತ್ತ ಪ್ರಯಾಣ ಬೇಳೆಸುತ್ತಿದ್ದಾರೆ.
ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಮಂತ್ರಾಲಯದತ್ತ ಪ್ರಯಾಣ ಬೆಳಸಿರುವ ದೃಶ್ಯ ರಾಯಚೂರು ಕೇಂದ್ರ ಬಸ್ ನಿಲ್ದಾಣದಲ್ಲಿ ಗುರುವಾರ ಬೆಳಗಿನಿಂದಲೇ ಕಂಡುಬರುತ್ತಿದೆ.
ನಿಲ್ದಾಣಕ್ಕೆ ಎಷ್ಟೇ ಬಸ್ಸುಗಳು ಬಂದು ನಿಂತ ಕ್ಷಣಾರ್ಧದಲ್ಲಿ ಬಸ್ ಫುಲ್ ಆಗಿಬಿಡುತ್ತಿವೆ. ಹೀಗಾಗಿ ನಿಲ್ದಾಣದಲ್ಲಿ ಬಸ್ ಸಿಬ್ಬಂದಿ ಕಾದು ನಿಂತು ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಪ್ರಮೇಯ ಇಲ್ಲವೇ ಇಲ್ಲ.
ಬಸ್ ಕಂಡಕ್ಟರ್ ಕೆಳಗೆ ಇಳಿಯುವುದಕ್ಕೂ ಅವಕಾಶ ನೀಡದೇ ಬಸ್ ಏರುವುದಕ್ಕೆ ನಾಮುಂದು ತಾಮುಂದು ಎಂದು ವೀರ ವನಿತೆಯರು ಸಿದ್ದರಾಗಿರುವ ದೃಶ್ಯ ಪ್ರತಿ ಬಸ್ ಬಂದು ನಿಂತ ಸಂದರ್ಭದಲ್ಲಿ ಕಂಡುಬರುತ್ತದೆ.
ಕೆಲ ಬಸ್ಸಿನಲ್ಲಿ ಉಚಿತ ಪ್ರಯಾಣ ಇಲ್ಲ ಎಂದು ಬಸ್ ನಿರ್ವಾಹಕ ಹೇಳಿದಾಗ ಆ ಬಸ್ಸಿನಲ್ಲಿ ಪ್ರಯಾಣ ಬೇಡ ಎಂದು ಇಳಿದು ಉಚಿತ ಪ್ರಯಾಣದ ಬಸ್ ಬರುವವರೆಗೂ ಕಾದು ಕುಳಿತುಕೊಳ್ಳುವಂತ ಅನೇಕ ಮಹಿಳೆಯರೂ ಕಾಣ ಸಿಗುತ್ತಾರೆ. ಬಸ್ಸಿನಿಂದ ಕಳಗಿಳಿಯುತ್ತಾ ನಮಗಾಗಿನೇ ಉಚಿತ ಬಸ್ಸುಗಳಿವೆ ಅವಕ್ಕನೇ ಹೋಗೋಮಾ ನಡಿರಿ ಎನ್ನುವ ಮಹಿಳೆಯರ ನಗುವುಳ್ಳ ಮಾತುಗಳು ಅಲ್ಲಿದ್ದವರ ಮುಖದಲ್ಲಿ ನಗು ತರಿಸಲೇ ಇರಲಾರದು.
ಪ್ರತಿ ಬಸ್ಸಿನಲ್ಲಿ ೧೦೦ ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದರೆ ಅದರಲ್ಲಿ ೮೦ ಕ್ಕೂ ಅಧಿಕ ಮಹಿಳಾ ಪ್ರಯಾಣಿಕರು ಕಂಡುಬರುತ್ತಾರೆ. ಇದರಿಂದ ಬಸ್ ಹೌಸ್ ಫುಲ್ ಗಲ್ಲೆ ಖಾಲಿ ಎನ್ನುವಂತಾಗಿದೆ ಸಧ್ಯದ ಸ್ಥಿತಿ.
ಅಪವಾದ ಎನ್ನುವಂತೆ ಕೆಲ ಮಹಿಳಾ ಪ್ರಯಾಣಿಕರು ಹಣ ಸಂದಾಯಮಾಡಿ ಪ್ರಯಾಣಿಸುವ ಬಸ್ಸುಗಳಲ್ಲಿ ಪ್ರಯಾಣ ಮಾಡುವುದನ್ನು ಕಾಣಬಹುದು. ಈ ಮಹಿಳೆಯರು ಮೌನವಾಗಿ ಬಸ್ಸಿನಲ್ಲಿ ಕುಳಿತುಕೊಂಡು ಟಿಕೆಟ್ ಪಡೆದು ಪ್ರಯಾಣ ಮಾಡುವವರನ್ನು ಕಾಣಬಹುದು.